ಸಿಎಂ ನಮ್ಮ ಬೇಡಿಕೆ ಈಡೇರಿಸುವವರಗೆ ನನ್ನ ಶವ ಸಂಸ್ಕಾರ ಬೇಡ: ಡೆತ್ ನೋಟ್ ಬರೆದು ರೈತ ಆತ್ಮಹತ್ಯೆ

ಸಾಲ ಮನ್ನಾ ಹಾಗೂ ತಾವು ಬೆಳೆದ ಬೆಳಗೆ ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಅನಿರ್ಧಿಷ್ಟಾವಧಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪುಣೆ: ಸಾಲ ಮನ್ನಾ ಹಾಗೂ ತಾವು ಬೆಳೆದ ಬೆಳಗೆ ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಅನಿರ್ಧಿಷ್ಟಾವಧಿ ಮುಷ್ಕರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಗುರುವಾರ ರಾತ್ರಿ ರೈತನೊಬ್ಬ ಮುಖ್ಯಮಂತ್ರಿ ತಮ್ಮ ಸ್ಥಳಕ್ಕೆ ಭೇಟಿ ನೀಡಿ ರೈತರ ಬೇಡಿಕೆ ಈಡೇರಿಸುವವರೆಗೆ ನನ್ನ ಶವ ಸಂಸ್ಕಾರ ಮಾಡಬೇಡಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಶರಣಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತರ ಸೋಲಾಪುರ ಜಿಲ್ಲೆಯ ಕರ್ಮಲ್ ತೆಹ್ಸಿಲ್ ನಿವಾಸಿ ಧಾನಾಜಿ ಜಾಧವ್(45) ಎಂದು ಗುರುತಿಸಲಾಗಿದ್ದು, ನಿನ್ನೆ ರಾತ್ರಿ ತಮ್ಮ ಮನೆ ಬಳಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೋಲಾಪುರ ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ ಅವರು ಹೇಳಿದ್ದಾರೆ.
ಕರ್ಮಲ್ ಪೊಲೀಸ್ ಠಾಣೆಯ ಪೊಲೀಸರ ಪ್ರಕಾರ, ಜಾಧವ್ ಅವರು ತಮ್ಮ ಗೆಳೆಯರಿಗೆ ಮತ್ತು ಸಂಬಂಧಿಕರಿಗೆ ಬರೆದ ಪತ್ರ ಪತ್ತೆಯಾಗಿದ್ದು, ಅದರಲ್ಲಿ 'ನಾನು ಒಬ್ಬ ರೈತ, ಧಾನಾಜಿ ಚಂದ್ರಕಾಂತ್ ಜಾಧವ್. ಇಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ. ಆದರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಇಲ್ಲಿಗೆ ಬಂದು ರೈತರ ಬೇಡಿಕೆ ಈಡೇರಿಸುವವರೆಗೆ ನನ್ನ ಶವ ಸಂಸ್ಕಾರ ಮಾಡಬೇಡಿ' ಎಂದು ಬರೆದಿದ್ದಾರೆ.
ದೇವೇಂದ್ರ ಫಡ್ನವಿಸ್ ಅವರು ಗ್ರಾಮಕ್ಕೆ ಭೇಟಿ ನೀಡಿ ರೈತರ ಸಾಲ ಮನ್ನಾ ಮಾಡುವವರೆಗೆ ಶವ ಸಂಸ್ಕಾರ ಮಾಡಬೇಡಿ ಎಂದು ರೈತ ಡೆತ್ ನೋಟ್ ಬರೆದಿರುವುದನ್ನು ಜಿಲ್ಲಾಧಿಕಾರಿ ಭೋಸಲೆ ಅವರು ಸಹ ಖಚಿತಪಡಿಸಿದ್ದಾರೆ.
ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಮಹಾರಾಷ್ಟ್ರ ರೈತರು ಕಳೆದ ಗುರುವಾರ ಶಿರಡಿ ಪ್ರದೇಶದ ರಸ್ತೆ ಮತ್ತು  ಬೀದಿಗಳಲ್ಲಿ ಹಾಲನ್ನು ಸುರಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com