ಮಧ್ಯ ಪ್ರದೇಶದಲ್ಲಿ ಪೊಲೀಸರು ಗೋಲಿಬಾರ್ ನಡೆಸಿ ರೈತರನ್ನು ಹತ್ಯೆಗೈದದನ್ನು ವಿರೋಧಿಸಿ ಒರಿಸ್ಸಾದ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರ ಮೇಲೆ
ಭುವನೇಶ್ವರ: ಮಧ್ಯ ಪ್ರದೇಶದಲ್ಲಿ ಪೊಲೀಸರು ಗೋಲಿಬಾರ್ ನಡೆಸಿ ರೈತರನ್ನು ಹತ್ಯೆಗೈದದನ್ನು ವಿರೋಧಿಸಿ ಒರಿಸ್ಸಾದ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ.
ರಾಜ್ಯ ಅತಿಥಿ ಗೃಹದಿಂದ ಖುರ್ದ ಜಿಲ್ಲೆಯ ಜತನಿಗೆ ತೆರಳುತ್ತಿರುವಾಗ ಸಿಂಗ್ ಅವರ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿದೆ. 'ಸಬ್ ಕ ಸಾಥ್, ಸಬ್ ಕ ವಿಕಾಸ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವರು ಒರಿಸ್ಸಾ ಪ್ರವಾಸದಲ್ಲಿದ್ದಾರೆ.
ಇದೆ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟಗಳನ್ನು ಹಿಡಿದು ಕೇಂದ್ರ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಘಟನೆಯ ನಂತರ ಪೊಲೀಸ್ ಕಮಿಷನರ್ ಎಫ್ ಐ ಆರ್ ದಾಖಲಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಲೋಕನಾಥ್ ಮಹಾರಥಿ ಅವರನ್ನು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಕಮಿಷನರ್ ವೈ ಬಿ ಖುರಾನಿಯ ಹೇಳಿದ್ದಾರೆ.
ಕೇಂದ್ರ ಸರ್ಕಾರ ರೈತ ವಿರೋಧಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪ್ರದೀಪ್ ಮಾಜಿ ಆರೋಪಿಸಿದ್ದಾರೆ.
"ಅವರಿಗೆ ಒಂದಷ್ಟು ಸೂಕ್ಷತೆಯ ಅರಿವು ಮೂಡುವಂತೆ ಮಾಡಲು ಈ ಮೊಟ್ಟೆ ದಾಳಿಯನ್ನು ಮಾಡಲಾಯಿತು. ಇದರಿಂದಾದರೂ ಅವರಿಗೆ ಒರಿಸ್ಸಾದ ಮತ್ತು ರಾಷ್ಟ್ರದ ಇತರ ಭಾಗದ ರೈತರ ಸಮಸ್ಯೆಗಳನ್ನು ಕಾಣಲಿ ಎಂದು" ಕೂಡ ಮಾಜಿ ಹೇಳಿದ್ದಾರೆ.