ಜಮ್ಮು: ಕಳೆದ 96 ಗಂಟೆಗಳಲ್ಲಿ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ 13 ಮಂದಿ ಒಳನುಸುಳುಕೋರ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಅಲ್ಲದೆ ಅನೇಕ ಒಳನುಸುಳುವಿಕೆಯನ್ನು ಸೇನೆ ನಾಶಪಡಿಸಿದೆ.
ಅನೇಕ ಉಗ್ರಗಾಮಿ ಗುಂಪುಗಳ ಮೂಲಕ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಪ್ರಚೋದನಕಾರಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಉದಂಪುರ್ ಕಮಾಂಡ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಡಿ ನಿಯಂತ್ರಣ ಪ್ರದೇಶವಾದ ಗುರೆಝ್, ಮಚಿಲ್, ನೌಗಮ್ ಮತ್ತು ಉರಿ ವಲಯದಲ್ಲಿ ಭಾರತೀಯ ಸೈನ್ಯದ ಪಟ್ಟುಬಿಡದ ಕಾರ್ಯಾಚರಣೆಯಿಂದಾಗಿ ಒಳ ನುಸುಳುಕೋರರ ಗುಂಪನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ. ಇದರಿಂದ ಕಳೆದ 96 ಗಂಟೆಗಳಲ್ಲಿ 13 ಮಂದಿ ಉಗ್ರಗಾಮಿಗಳನ್ನು ಕೊಲ್ಲಲಾಗಿದೆ.
ಗುರೆಝ್ ಮತ್ತು ಉರಿ ವಲಯದಲ್ಲಿ ಸೇನಾ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ. ಐದು ಶಸ್ತ್ರಸಜ್ಜಿತ ಒಳನುಸುಳುಕೋರರನ್ನು ಉರಿ ವಲಯದಲ್ಲಿ ಕೊಲ್ಲಲಾಗಿದೆ. ಗಡಿ ನಿಯಂತ್ರಣ ರೇಖೆ ಹತ್ತಿರ ಗುರೇಝ್ ವಲಯದಲ್ಲಿ ಒರ್ವ ಉಗ್ರಗಾಮಿ ಹತನಾಗಿದ್ದಾನೆ.
ಸ್ಫೋಟಕಗಳು, ಉರಿಯುವ ವಸ್ತುಗಳು ಮತ್ತು ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿಗಳನ್ನು ಭಾರತೀಯ ಸೇನಾ ಯೋಧರು ವಶಪಡಿಸಿಕೊಂಡಿದ್ದಾರೆ. ಇದು ಪವಿತ್ರ ತಿಂಗಳ ರಂಜಾನ್ ಸಮಯದಲ್ಲಿ ಮುಗ್ಧ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಉನ್ನತ ಮಟ್ಟದ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಪಾಕಿಸ್ತಾನದ ಯೋಜನೆಯನ್ನು ಸೂಚಿಸುತ್ತದೆ.