ಮಂಡಸೌರ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಬುಧವಾರ ಮಂಡಸೌರ್ ಭೇಟಿ ನೀಡಿದ್ದು, ಪೊಲೀಸರ ಗೋಲಿಬಾರ್ ನಲ್ಲಿ ಮೃತಪಟ್ಟ ರೈತನ ಕುಟುಂಬಕ್ಕೆ 1 ಕೋಟಿ ರುಪಾಯಿ ಚೆಕ್ ನೀಡಿದ್ದಾರೆ.
ಕಳೆದ ಜೂನ್ 1ರಿಂದ ಸಾಲ ಮನ್ನಾ ಹಾಗೂ ಬೆಳೆಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಗೋಲಿ ನಡೆಸಿದ ಪರಿಣಾಮ ಆರು ರೈತರು ಮೃತಪಟ್ಟಿದ್ದರು. ಮೃತ ರೈತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 1 ಕೋಟಿ ರುಪಾಯಿ ಪರಿಹಾರ ಘೋಷಿಸಿತ್ತು.
ಇಂದು ಮಂಡಸೌರ್ ನ ಗೋಲಿಬಾರ್ ನಲ್ಲಿ ಮೃತಪಟ್ಟ ರೈತನ ಮನೆಗೆ ಭೇಟಿ ನೀಡಿದ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಕುಟುಂಬಕ್ಕೆ 1 ಕೋಟಿ ರುಪಾಯಿ ಚೆಕ್ ಹಸ್ತಾಂತಿರಿಸಿ, ಸಾಂತ್ವಾನ ಹೇಳಿದ್ದಾರೆ.
ಗೋಲಿಬಾರ್ ನಲ್ಲಿ ಮೃತಪಟ್ಟ ಇತರೆ ಐವರು ರೈತರ ಕುಟುಂಬಕ್ಕೆ ಮಂಡಸೌರ್ ಜಿಲ್ಲಾಧಿಕಾರಿಗಳು ಇ-ಪಾವತಿ ಮೂಲಕ ನೀಡಲಿದ್ದಾರೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.