ನಾನು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಲ್ಲ: ಸುಷ್ಮಾ ಸ್ವರಾಜ್

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಾವು ಮುಂದಿನ ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಎಂಬ ಮಾಧ್ಯಮಗಳ....
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಾವು ಮುಂದಿನ ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಎಂಬ ಮಾಧ್ಯಮಗಳ ವರದಿಯನ್ನು ಶನಿವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಅದು ಕೇವಲ ವದಂತಿ ಅಷ್ಟೆ ಎಂದಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಸರ್ಕಾರವಾಗಲಿ ಅಥವಾ ಪ್ರತಿಪಕ್ಷಗಳಾಗಲಿ ಇನ್ನೂ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ಆದರೆ ದೇಶದ ಪ್ರಥಮ ಪ್ರಜೆಯ ಸ್ಥಾನಕ್ಕೆ ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ಹೆಸರುಗಳು ಕೇಳಿಬರುತ್ತಿವೆ.
ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್ ಅವರು, ನಾನು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂಬುದು ಕೇವಲ ವದಂತಿ. ನಾನು ವಿದೇಶಾಂಗ ಸಚಿವೆಯಾಗಿ ಮುಂದುವರೆಯುತ್ತೇನೆ ಎಂದಿದ್ದಾರೆ.
ಈಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರಾವಧಿ ಜುಲೈ 24 ರಂದು ಮುಗಿಯಲಿದ್ದು ಆ ಸ್ಥಾನ ಅಲಂಕರಿಸಲು ಸುಷ್ಮಾ ಸ್ವರಾಜ್ ಎಲ್ಲಾ ರೀತಿಯಲ್ಲಿ ಅರ್ಹರಾಗಿದ್ದಾರೆ ಎಂದು ಬಿಜೆಪಿ ಮುಖಂಡರು ಮತ್ತು ಸಂಘ ಪರಿವಾರದ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ ಎಂದು ಇತ್ತೀಚಿಗೆ ಮಾಧ್ಯಮಗಳು ವರದಿ ಮಾಡಿದ್ದವು.
ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಕಸರತ್ತು ಮುಂದುವರಿದಿದ್ದು ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್ ಮತ್ತು ವೆಂಕಯ್ಯ ನಾಯ್ಡು ಶುಕ್ರವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ  ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com