ಪ್ರಧಾನಿ ಭೋಜನಕೂಟಕ್ಕೆ ಅಖಿಲೇಶ್ ಮಾಯಾವತಿ ಗೈರು: ಮುಲಾಯಂ ಹಾಜರು

ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಆಯೋಜಿಸಿದ್ದ ಭೋಜನ ಕೂಟಕ್ಕೆ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಗಳಾದ...
ಅಖಿಲೇಶ್  ಯಾದವ್ ಮತ್ತು ಮಾಯಾವತಿ
ಅಖಿಲೇಶ್ ಯಾದವ್ ಮತ್ತು ಮಾಯಾವತಿ
ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಆಯೋಜಿಸಿದ್ದ ಭೋಜನ ಕೂಟಕ್ಕೆ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್, ಮಾಯಾವತಿ ಮತ್ತು ಮುಲಾಯಂ ಸಿಂಗ್ ಯಾದವ್ ಅವರುಗಳನ್ನು ಆಹ್ವಾನಿಸಲಾಗಿತ್ತು.
ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಬೆಂಬಲ ನೀಡುವಂತೆ ಕೋರುವ ಉದ್ದೇಶದಿಂದ ಈ ಭೋಜನ ಕೂಟವನ್ನು ಆಯೋಜಿಸಲಾಗಿತ್ತು. 
ಅಖಿಲೇಶ್ ಯಾದವ್ ಮತ್ತು ಮಾಯಾವತಿ ಭೋಜನಕೂಟದಿಂದ ದೂರವೇ ಉಳಿದರು. ಆದರೆ ಎಸ್ ಪಿ ಮುಖಂಡ ಮುಲಾಯಂ ಸಿಂಗ್ ಎಲ್ಲರಿಗಿಂತ ಮೊದಲು ಸಿಎಂ ನಿವಾಸಕ್ಕೆ ಆಗಮಿಸಿದರು. ನಂತರ  ರಾಜ್ಯಪಾಲ ರಾಮ್ ನಾಯಕ್ ಮತ್ತು ಇಬ್ಬರು ಉಪ ಮುಖ್ಯಮಂತ್ರಿಗಳು ಮತ್ತು ಯೋಗಿ ಆದಿತ್ಯನಾಥ್ ಸಂಪುಟ ಸಹೋದ್ಯೋಗಿಗಳು ಮತ್ತು ಅನೇಕ ಬಿಜೆಪಿ ಮುಖಂಡರು ಆಗಮಿಸಿದರು.
ಸುಮಾರು 100 ಮಂದಿಗೆ ಆಹ್ವಾನ ನೀಡಲಾಗಿತ್ತು. ಪ್ರಮುಖ ಮುಸ್ಲಿಂ ನಾಯಕರು, ಬುದ್ದಿಜೀವಿಗಳು, ಸೇರಿದಂತೆ ಹಲವರು ಪ್ರಧಾನಿ ಮೋದಿ ಅವರಿಗಾಗಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು.
ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್ ಅವರನ್ನು ಬಿಜೆಪಿ ಘೋಷಿಸಿರುವುದು ತಮಗೆ ಸಂತಸ ತಂದಿದೆ ಎಂದು ಎಸ್ ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ. ರಾಮನಾಥ್ ಉತ್ತಮ ಅಭ್ಯರ್ಥಿ, ಅವರನ್ನು ನಾನು ಬಹಳ ಹಿಂದಿನಿಂದಲೂ ನೋಡಿದ್ದೇನೆ, ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿಗೆ ಹೆಚ್ಚಿನ ಬಹುಮತವಿದೆ, ವಿರೋಧ ಪಕ್ಷಗಳು ಯಾವ ನಿರ್ಧಾರ ಕೈಗೊಳ್ಳಲಿವೆ ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ ಎಂದು ಮುಲಾಯಂ ಹೇಳಿದ್ದಾರೆ,
ತಮ್ಮ ಮಗ ಅಖಿಲೇಶ್ ಜೊತೆ ಭಿನ್ನಾಭಿಪ್ರಾಯ ಇರುವುದು ನಿಜ ಎಂದು ಮುಲಾಯಂ ಒಪ್ಪಿಕೊಂಡಿದ್ದಾರೆ. ತಮ್ಮ ನಿರ್ಧಾರವನ್ನು ಜೂನ್ 22 ರ ನಂತರ ಅಂದರೆ ವಿರೋಧ ಪಕ್ಷಗಳ ಜೊತೆಗಿನ ಸಭೆಯ ನಂತರ ಪ್ರಕಟಿಸುವುದಾಗಿ ಅಖಿಲೇಶ್ ಯಾದವ್ ತಿಳಿಸಿದ್ದಾರೆ. 
ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ರಾಮನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡಿರುವುದನ್ನು  ಬಿಎಸ್ ಪಿ ನಾಯಕಿ ಮಾಯಾವತಿ ಸ್ವಾಗತಿಸಿದ್ದಾರೆ. ಆದರೂ ಅವರು ಭೋಜನ ಕೂಟಕ್ಕೆ ಹಾಜರಾಗಿರಲಿಲ್ಲ. ಶಿವಸೇನೆ ಕೂಡ ಕೋವಿಂದ್ ಅವರಿಗೆ ತನ್ನ ಬೆಂಬಲ ಸೂಚಿಸಿದೆ.
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತು ಹಲವು ತಿಂಗಳುಗಳ ಕಾಲ ನಡೆದ ಊಹೆ, ಎಣಿಕೆಗಳಿಗೆ ಬಿಜೆಪಿ ಕೊನೆಗೂ ತೆರೆ ಎಳೆದಿದೆ. ತನ್ನ ಎಂದಿನ ಅನಿರೀಕ್ಷಿತ ಹಾಗೂ ಬೆರಗು ಮೂಡಿಸುವ ಶೈಲಿಯಲ್ಲಿಯೇ ಅಭ್ಯರ್ಥಿ ಹೆಸರು ಪ್ರಕಟಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com