ನವದೆಹಲಿ: ಸಾಲದಲ್ಲಿ ಮುಳುಗಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಈ ಸಂಬಂಧ ಬುಧವಾರ ಏರ್ ಇಂಡಿಯಾ ಖಾಸಗೀಕರಣಕ್ಕೆ ಕೇಂದ್ರ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಣಕಾಸು ಹಾಗೂ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು, ಏರ್ ಇಂಡಿಯಾ ಮೇಲಿನ ಹೂಡಿಕೆ ಹಿಂಪಡೆಯಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಹೂಡಿಕೆ ವಾಪಸ್ ಪಡೆಯಲು ಸಂಪುಟ ತಾತ್ವಿಕ ಒಪ್ಪಿಗೆ ನೀಡಿದ್ದು ಹಂತಹಂತವಾಗಿ ಹೂಡಿಕೆಯನ್ನು ಹಿಂಪಡೆಯಲಾಗುವುದು ಎಂದು ಜೇಟ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಏರ್ ಇಂಡಿಯಾ ಮೇಲಿನ ಹೂಡಿಕೆಯನ್ನು ಶೇ.100ರಷ್ಟು ಹಿಂಪಡೆಯುವ ಮೂಲಕ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ.
ಅರುಣ್ ಜೇಟ್ಲಿ ಅವರು ಮೇ 29ರಂದೆ ಏರ್ ಇಂಡಿಯಾ ಖಾಸಗೀಕರಣೊಳಿಸುವ ಬಗ್ಗೆ ಸುಳಿವು ನೀಡಿದ್ದರು.