ಮಹಿಳಾ ಖೈದಿ ಕುತ್ತಿಗೆಗೆ ಸೀರೆ ಹಾಕಿ ಎಳೆದೊಯ್ಯುವುದನ್ನು ನೋಡಿದೆ: ಇಂದ್ರಾಣಿ ಮುಖರ್ಜಿ

ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಮಾಧ್ಯಮ ಉದ್ಯಮಿ ಇಂದ್ರಾಣಿ ಮುಖರ್ಜಿ ತನ್ನೊಂದಿಗೆ ಜೈಲಿನಲ್ಲಿದ್ದ....
ಇಂದ್ರಾಣಿ ಮುಖರ್ಜಿ
ಇಂದ್ರಾಣಿ ಮುಖರ್ಜಿ
ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಮಾಧ್ಯಮ ಉದ್ಯಮಿ ಇಂದ್ರಾಣಿ ಮುಖರ್ಜಿ ತನ್ನೊಂದಿಗೆ ಜೈಲಿನಲ್ಲಿದ್ದ ಸಹ ಖೈದಿ ಸಾವಿನ ಬಗ್ಗೆ ಬುಧವಾರ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದು, ಮಹಿಳಾ ಖೈದಿಯ ಕುತ್ತಿಗೆಗೆ ಸೀರೆ ಹಾಕಿ ಜೈಲು ಅಧೀಕ್ಷಕರ ಕೊಠಡಿಯಿಂದ ಎಳೆದೊಯ್ಯುತ್ತಿರುವುದನ್ನು ನಾನು ನೋಡಿದೆ ಎಂದಿದ್ದಾರೆ.
ಕಳೆದ ಶನಿವಾರ ಮುಂಬೈನ ಬೈಕುಲಾ ಜೈಲಿನಲ್ಲಿ ನಡೆದ ಗಲಭೆಯ ವೇಳೆ ಮಹಿಳಾ ಜೈಲು ಅಧಿಕಾರಿಗಳ ಹಲ್ಲೆಯಿಂದಾಗಿ ಇಂದ್ರಾಣಿ ಸಹಖೈದಿ ಮಂಜುಳಾ ಶೆಟ್ಟಿ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಸಂಬಂಧ ದಾಖಲಾಗಿರುವ ಎಫ್ಐಆರ್ ನಲ್ಲಿ ಮೃತಪಟ್ಟ ಮಹಿಳಾ ಖೈದಿಯ ಗುಪ್ತಾಂಗಕ್ಕೆ ಲಾಠಿ ಹಾಕಿ ಕಿರುಕುಳ ನೀಡಲಾಗಿದೆ ಎಂದು ದೂರಲಾಗಿದೆ.
ಈ ಕುರಿತು ಇಂದು ಮುಂಬೈ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿರುವ ಇಂದ್ರಾಣಿ ಮುಖರ್ಜಿ, ಜೈಲಿನ ಸಿಬ್ಬಂದಿ ಮಂಜುಳಾ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನಾನು ಮತ್ತು ಇತರೆ ಖೈದಿಗಳು ಬಾಗಿಲಿನ ರಂಧ್ರದ ಮೂಲಕ ನೋಡಿದ್ದೇವೆ. ಆದರೆ ಇದನ್ನು ಕೋರ್ಟ್ ನಲ್ಲಿ ಹೇಳಿದರೆ ನೀವು ಅದೇ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಜೈಲು ಸಿಬ್ಬಂದಿ ಎಚ್ಚರಿಸಿರುವುದಾಗಿ ಕೋರ್ಟ್ ಗೆ ತಿಳಿಸಿದ್ದಾರೆ.
ನಿನ್ನೆಯಷ್ಟೇ ಇಂದ್ರಾಣಿ ಪರ ವಕೀಲರು ಸಹಕೈದಿ ಮಹಿಳೆ ಮೇಲೆ ಪೊಲೀಸರೇ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಇದಕ್ಕೆ ಸಾಕ್ಷಿಯಾಗಿದ್ದ ತನ್ನ ಕಕ್ಷಿದಾರೆ ಇಂದ್ರಾಣಿ ಸತ್ಯ ಬಾಯಿಬಿಡಬಾರದು ಎಂದು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರು.
ಮಹಿಳಾ ಖೈದಿ ಸಾವಿಗೆ ತನ್ನ ಕಕ್ಷಿದಾರೆ ಇಂದ್ರಾಣಿ ಮುಖರ್ಜಿ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಈ ಸಂಬಂಧ ಕೋರ್ಟ್ ನಲ್ಲಿ ಹೇಳಿಕೆ ನೀಡಲು ಬಯಸಿದ್ದಾರೆ ಎಂದು ಇಂದ್ರಾಣಿ ಪರ ವಕೀಲ ಗುಂಜನ್ ಮಂಗಲಾ ನಿನ್ನೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಇಂದ್ರಾಣಿ ಮುಖರ್ಜಿಯನ್ನು ಮುಂಬೈ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
ಸಹ ಖೈದಿ ಸಾವಿಗೆ ಸಂಬಂಧಿಸಿದಂತೆ ನನ್ನ ಬಳಿ ಮಹತ್ವ ಮಾಹಿತಿ ಇದ್ದು, ಅದನ್ನು ಹೇಳಬಾರದು ಎಂದು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಾಯಿ ಬಿಟ್ಟರೆ ತನ್ನ ಮೇಲು ಲೈಂಗಿಕ ದೌರ್ಜನ್ಯ ಎಸಗುವುದಾಗಿ ಎಚ್ಚರಿಸಿದ್ದಾರೆ ಎಂದು 44 ವರ್ಷದ ಇಂದ್ರಾಣಿ ತಮ್ಮ ವಕೀಲರ ಮೂಲಕ ಕೋರ್ಟ್ ಗೆ ತಿಳಿಸಿದ್ದರು.
ಖೈದಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಆರು ಅಧಿಕಾರಿಗಳನ್ನು ಸಹ ಸೇವೆಯಿಂದ ಅಮಾನತುಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com