ಗೋ ಭಕ್ತಿಯ ಹೆಸರಲ್ಲಿ ಮನುಷ್ಯರ ಹತ್ಯೆ ತಪ್ಪು: ಗೋ ರಕ್ಷಕರಿಗೆ ಪ್ರಧಾನಿ ಮೋದಿ ಎಚ್ಚರಿಕೆ

ಗೋ ರಕ್ಷಣೆಯ ಹೆಸರಿನಲ್ಲಿ ಹತ್ಯೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ನಲ್ಲಿ ಪ್ರಧಾನಿ ಮೋದಿ ಭಾಷಣ
ಗುಜರಾತ್ ನಲ್ಲಿ ಪ್ರಧಾನಿ ಮೋದಿ ಭಾಷಣ
ಗಾಂಧಿನಗರ್: ಗೋ ಭಕ್ತಿಯ ಹೆಸರಿನಲ್ಲಿ ಮನುಷ್ಯರ ಹತ್ಯೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಗೋರಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ.  
ಗುಜರಾತ್ ನ ಸಬರ್ ಮತಿ ಆಶ್ರಮದ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳ ಬಗ್ಗೆ ಮೌನ ಮುರಿದಿದ್ದು, ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಥಳಿತ ಹತ್ಯೆ ಪ್ರಕರಣಗಳ ಬಗ್ಗೆ ತಮಗೆ ಬೇಸರವಾಗಿದೆ ಎಂದು ಹೇಳಿದ್ದಾರೆ. 
ಈ ದೇಶದಲ್ಲಿ ಯಾರಿಗೂ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರವಿಲ್ಲ. ಗೋರಕ್ಷಣೆ ಮಾಡಬೇಕಿದೆ, ಹಾಗೂ ಮಹಾತ್ಮಾ ಗಾಂಧಿ ಹಾಗೂ ಆಚಾರ್ಯರಷ್ಟು ಯಾರೂ ಗೋವಿನ ಸಂತತಿ ಉಳಿಸುವ ಬಗ್ಗೆ ಮಾತನಾಡಿಲ್ಲ. ಆದರೆ ಗೋ ರಕ್ಷಣೆಯ ಹೆಸರಿನಲ್ಲಿ ಹತ್ಯೆ ಮಾಡುವುದನ್ನು ಗಾಂಧಿ ಒಪ್ಪುತ್ತಿರಲಿಲ್ಲ ಎಂದು ಮೋದಿ ಹೇಳಿದ್ದಾರೆ.  
ನಮ್ಮದು ಅಹಿಂಸೆಯ ನೆಲ, ನಮ್ಮದು ಮಹಾತ್ಮಾ ಗಾಂಧಿ ಅವರಿದ್ದ ಭೂಮಿ, ಅದನ್ನೇಕೆ ಮರೆಯುತ್ತಿದ್ದೇವೆ? ನಮ್ಮ ಸಮಾಜದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ. ಹಿಂಸಾಚಾರದಿಂದ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಮೋದಿ ಗೋರಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. 
ಮಹಾತ್ಮಾ ಗಾಂಧಿ ಅವರ ಕನಸಿನ ರಾಷ್ಟ್ರವನ್ನು ನಿರ್ಮಾಣ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀದಿದ್ದು, ಒಗ್ಗಟ್ಟಿನಿಂದ ಮುನ್ನಡೆಯೋಣ, ಮಹಾತ್ಮಾ ಗಾಂಧಿ ಅವರ ಕನಸಿನ ಭಾರತವನ್ನು ಸೃಷ್ಟಿಸೋಣ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹೆಮ್ಮೆ ಪಡುವಂತಹ ಭಾರತವನ್ನು ನಿರ್ಮಿಸೋಣ ಎಂದು ಪ್ರಧಾನಿ ಕರೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com