ರಾಹುಲ್ ಗಾಂಧಿ
ದೇಶ
ಜಿಎಸ್ ಟಿ ಜಾರಿ ಒಂದು 'ತಮಾಷೆ': ರಾಹುಲ್ ಗಾಂಧಿ
ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ(ಜಿಎಎಸ್ ಟಿ) ಜಾರಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ....
ನವದೆಹಲಿ: ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ(ಜಿಎಎಸ್ ಟಿ) ಜಾರಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಟುವಾಗಿ ಟೀಕಿಸಿದ್ದು, ಇದೊಂದು ತಮಾಷೆ ಎಂದಿದ್ದಾರೆ. ಅಲ್ಲದೆ ಯಾವುದೇ ಪೂರ್ವ ಸಿದ್ಧತೆ ಅಥವಾ ಮುನ್ನೋಟವಿಲ್ಲದೆ ಕೇವಲ ಸ್ವ ಪ್ರಚಾರಕ್ಕಾಗಿ ಮಧ್ಯರಾತ್ರಿ ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸದ್ಯ ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಟ್ವೀಟರ್ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಎಸ್‌ಟಿ ಯನ್ನು ಅದಕ್ಷ, ಅಸಮರ್ಥ ಮತ್ತು ಸಂವೇದನೆಯೇ ಇಲ್ಲದ ಸರ್ಕಾರ ಜಾರಿಗೊಳಿಸುತ್ತಿದೆ ಎಂದಿದ್ದಾರೆ.
ಜಿಎಸ್‌ಟಿ ಎನ್ನುವುದು ನೋಟು ಅಪನಗದೀಕರಣದ ಹಾಗಲ್ಲ. ಇದೊಂದು ಆರ್ಥಿಕ ಸುಧಾರಣಾ ಕ್ರಮ. ಕಾಂಗ್ರೆಸ್ ಇದನ್ನು ವಿಶಿಷ್ಟವಾಗಿ ರೂಪಿಸಿ ಬೆಂಬಲಿಸಿತ್ತು. ಆದರೆ ನೋಟು ಅಪನಗದೀಕರಣವನ್ನು ಯದ್ವಾತದ್ವಾ ಜಾರಿಗೆ ತಂದ ಹಾಗೆ ಕೇಂದ್ರ ಸರ್ಕಾರ ಈಗ ಜಿಎಸ್‌ಟಿಯನ್ನು ಕೂಡ ಯಾವುದೇ ಸರಿಯಾದ ಮುನ್ನೋಟ ಇಲ್ಲದೆ ಜಾರಿಗೆ ತರುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಜಿಎಸ್‌ಟಿ ಜಾರಿಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಅದ್ದೂರಿಯ, ಮಧ್ಯರಾತ್ರಿಯ ಸಂಸತ್ ಅಧಿವೇಶನ ಏರ್ಪಡಿಸಿರುವುದು ಕೇವಲ ಸ್ವ ಪ್ರಚಾರಕ್ಕಾಗಿ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ