ಎನ್.ಚಂದ್ರಬಾಬು ನಾಯ್ಡು ಮತ್ತು ಎನ್.ಲೋಕೇಶ್
ಎನ್.ಚಂದ್ರಬಾಬು ನಾಯ್ಡು ಮತ್ತು ಎನ್.ಲೋಕೇಶ್

5 ತಿಂಗಳಲ್ಲಿ ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಆಸ್ತಿ 14.50 ಕೋಟಿಯಿಂದ 330 ಕೋಟಿಗೆ ಏರಿಕೆ!

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪುತ್ರ ಎನ್.ಲೋಕೇಶ್ ...
Published on
ಹೈದರಾಬಾದ್: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪುತ್ರ ಎನ್.ಲೋಕೇಶ್ ಅವರ ವೈಯಕ್ತಿಕ ಆಸ್ತಿ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ ವರ್ಷ ಅಕ್ಟೋಬರ್ ನಲ್ಲಿ 14.50 ಕೋಟಿಯಿದ್ದರೆ ಈ ವರ್ಷ ಫೆಬ್ರವರಿ ವೇಳೆಗೆ 330 ಕೋಟಿ ಮೌಲ್ಯವಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ತಮ್ಮ ಆಸ್ತಿ ವಿವರವನ್ನು ಲೋಕೇಶ್ ಘೋಷಣೆ ಮಾಡಿಕೊಂಡಿದ್ದಾರೆ.
ಲೋಕೇಶ್ ಅಫಿಡವಿಟ್ಟಿನಲ್ಲಿ, ತಮಗೆ 2,73,83 ,94,996 ಚರಾಸ್ತಿಯಿದ್ದು, ಕುಟುಂಬ ಒಡೆತನದ ಹೆರಿಟೇಜ್ ಫುಡ್ಸ್ ಲಿಮಿಟೆಡ್ ನ ಭಾಗವಾಗಿ ಸಿಕ್ಕಿದೆ ಎಂದು ನಮೂದಿಸಿದ್ದಾರೆ.
ಈ ಹಿಂದೆ ಚಂದ್ರಬಾಬು ನಾಯ್ಡು ಕುಟುಂಬದ ಒಡೆತನದಲ್ಲಿದ್ದ ಹೆರಿಟೇಜ್ ಫುಡ್ಸ್ ನ ಒಂದು ಭಾಗವನ್ನು ಫ್ಯೂಚರ್ ರಿಟೈಲ್ ಲಿಮಿಟೆಡ್ ಗೆ ಕಳೆದ ವರ್ಷ  ನವೆಂಬರ್ 8ರಂದು ಮಾರಾಟ ಮಾಡಲಾಗಿತ್ತು. 295  ಕೋಟಿ  ರೂಪಾಯಿ ಷೇರು ಮಾರಾಟ ಮಾಡಿ ಹೆರಿಟೇಜ್ ಫುಡ್ಸ್ ಶೇಕಡಾ 3.65ರಷ್ಟು ಷೇರು ಪಡೆದುಕೊಂಡಿತ್ತು. ಲೋಕೇಶ್ ಹೆರಿಟೇಜ್ ಫುಡ್ಸ್ ನ ಕಾರ್ಯಕಾರಿ ನಿರ್ದೇಶಕರಾಗಿದ್ದರು.
ಲೋಕೇಶ್ 18 ಕೋಟಿ ರೂಪಾಯಿಯಷ್ಟು ಸ್ಥಿರಾಸ್ತಿ, 38.51 ಕೋಟಿ ಪಿತ್ರಾರ್ಜಿತ ಆಸ್ತಿ ಮತ್ತು 6.28 ಕೋಟಿ ಸಾಲ ಒಟ್ಟು ಸೇರಿ 330 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಕಳೆದ ಅಕ್ಟೋಬರ್ ನಲ್ಲಿ ಲೋಕೇಶ್ ಒಟ್ಟು 14.50 ಕೋಟಿ ಆಸ್ತಿ ಮತ್ತು 6.35 ಕೋಟಿ ಸಾಲ ಹೊಂದಿದ್ದರೆ, ಅವರ ಪತ್ನಿ ಬ್ರಹ್ಮಣಿ 5.38 ಕೋಟಿ ಆಸ್ತಿ ಹೊಂದಿದ್ದಾರೆ. ಅವರ ಒಂದು ವರ್ಷದ ಪುತ್ರ ದೇವಾಂಶು 11.17 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾನೆ ಎಂದು ಘೋಷಿಸಿಕೊಂಡಿದ್ದರು.
ಇತ್ತೀಚಿನ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ನನ್ನ ಆಸ್ತಿಗಳ ಮೌಲ್ಯವನ್ನು ಘೋಷಿಸಿಕೊಂಡಿದ್ದೇನೆ. ಕಳೆದ 5 ತಿಂಗಳಲ್ಲಿ ಆಸ್ತಿಯ ಮೌಲ್ಯ ಪರಿಷ್ಕರಣೆಯಾಗಿದೆಯೇ ಹೊರತು  ಹೆಚ್ಚಿನ ಆಸ್ತಿ ಪಡೆಯಲಿಲ್ಲ. ಮಾರುಕಟ್ಟೆಯ ನಿಜವಾದ ಮೌಲ್ಯಕ್ಕೆ ಅನುಗುಣವಾಗಿ ಆಸ್ತಿ ಮೌಲ್ಯವನ್ನು ಘೋಷಣೆ ಮಾಡಿಕೊಳ್ಳಿ ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ಅದಕ್ಕೆ ಅನುಗುಣವಾಗಿ ಆಸ್ತಿ ಮೌಲ್ಯ ಘೋಷಣೆ ಮಾಡಿಕೊಂಡಿದ್ದೇನೆ ಎಂದು ಲೋಕೇಶ್ ಸ್ಪಷ್ಟನೆ ನೀಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com