ಮಣಿಪುರ: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಇಬೊಬಿ ಸಿಂಗ್ ಗೆ ರಾಜ್ಯಪಾಲೆ ನಜ್ಮಾ ಹಫ್ತುಲ್ಲಾ ಸೂಚನೆ

ಮಣಿಪುರದ ಸ್ಥಾನಿಕ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ಅವರಿಗೆ ತಕ್ಷಣವೇ ರಾಜೀನಾಮೆ ಸಲ್ಲಿಸಲು...
ಮಣಿಪುರ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್
ಮಣಿಪುರ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್
ಇಂಫಾಲ್: ಮಣಿಪುರದ ಸ್ಥಾನಿಕ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ಅವರಿಗೆ ತಕ್ಷಣವೇ ರಾಜೀನಾಮೆ ಸಲ್ಲಿಸಲು ಹೇಳಿರುವ ರಾಜ್ಯಪಾಲೆ ನಜ್ಮಾ ಹೆಪ್ತುಲ್ಲಾ, ಈ ಮೂಲಕ ಮುಂದಿನ ಸರ್ಕಾರ ರಚನೆಗೆ ಪ್ರಕ್ರಿಯೆ ಆರಂಭಿಸಬಹುದು ಎಂದು ಹೇಳಿದ್ದಾರೆ.
ಇಬೊಬಿ ಸಿಂಗ್ ಕಳೆದ ರಾತ್ರಿ ಉಪ ಮುಖ್ಯಮಂತ್ರಿ ಗ್ಯೈಕಮ್ಗಮ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಟಿಎನ್ ಹೌಕಿಪ್ ಅವರ ಜೊತೆ ರಾಜ್ಯಪಾಲರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮುಂದಿನ ಸರ್ಕಾರ ರಚನಗೆ ಪ್ರಕ್ರಿಯೆ ಆರಂಭಿಸಲು ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಜ್ಮಾ ಹಫ್ತುಲ್ಲಾ ಹೇಳಿದ್ದಾರೆ ಎಂದು ರಾಜಭವನದ ಉನ್ನತ ಮೂಲಗಳು ತಿಳಿಸಿವೆ.
ಕಾನೂನು ಪ್ರಕಾರ, ಪ್ರಸ್ತುತ ಇರುವ ಮುಖ್ಯಮಂತ್ರಿ ರಾಜೀನಾಮೆ ನೀಡದೆ ಮುಂದಿನ ಸರ್ಕಾರ ರಚನೆ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ 28 ಕಾಂಗ್ರೆಸ್ ಶಾಸಕರ ಬೆಂಬಲವನ್ನು ತೋರಿಸಿ ಮತ್ತು ನಾಲ್ಕು ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಶಾಸಕರ ಬೆಂಬಲವಿದ್ದು ಸರ್ಕಾರ ರಚನೆಗೆ ಬೆಂಬಲವಿದೆ ಎಂದು ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಖಾಲಿ ಬಿಳಿ ಹಾಳೆಯಲ್ಲಿ ಎನ್ ಪಿಪಿ ಶಾಸಕರ ಬೆಂಬಲವಿದೆ ಎಂದು ತೋರಿಸಿದರೆ ಆಗುವುದಿಲ್ಲ. ನಾನದನ್ನು ಪರೀಕ್ಷಿಸಬೇಕಾಗುತ್ತದೆ. ಆ ಪಕ್ಷದ ಅಧ್ಯಕ್ಷರು ಮತ್ತು ಶಾಸಕರನ್ನು ಕರೆತರುವಂತೆ ಮುಖ್ಯಮಂತ್ರಿಗೆ ಹೆಫ್ತುಲ್ಲಾ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಆದರೆ ರಾಜ್ಯಪಾಲರ ಸೂಚನೆಯನ್ನು ಮುಖ್ಯಮಂತ್ರಿ ಇಬೊಬಿ ಸಿಂಗ್ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ. ತಮಗೆ ಬಹುಮತ ಶಾಸಕರ ಬೆಂಬಲವಿದ್ದು, ಸರ್ಕಾರಕ್ಕೆ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದ್ದಾರೆ ಎಂದು ಗೊತ್ತಾಗಿದೆ. 
ಈ ಮಧ್ಯೆ ಬಿಜೆಪಿಯ 21 ಶಾಸಕರು, ಎನ್ ಪಿಪಿ ಅಧ್ಯಕ್ಷ ಮತ್ತು ನಾಲ್ವರು ಶಾಸಕರು, ಓರ್ವ ಕಾಂಗ್ರೆಸ್ ಶಾಸಕ, ಎಲ್ ಜೆಪಿ ಮತ್ತು ಟಿಎಂಸಿಯ ಶಾಸಕರು ಗವರ್ನರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೇಳಿದ್ದಾರೆ.
60 ಸದಸ್ಯರ ವಿಧಾನಸಭೆಯಲ್ಲಿ 32 ಶಾಸಕರ ಬೆಂಬಲವಿದೆ ಎಂದು ಬಿಜೆಪಿ ಹೇಳುತ್ತಿದೆ.
ಮಣಿಪುರದಲ್ಲಿ ಮೊನ್ನೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು, ಬಿಜೆಪಿ 21, ಎನ್ ಪಿಪಿ ಮತ್ತು ಎನ್ ಪಿಎಫ್ ತಲಾ 4 ಸ್ಥಾನಗಳನ್ನು, ಎಲ್ ಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ತಲಾ 1 ಸೀಟುಗಳನ್ನು ಗೆದ್ದುಕೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com