ಅನಾರೋಗ್ಯ ರಜೆಯ ನಂತರ ಲೋಕಸಭೆಗೆ ಸುಷ್ಮಾ ಆಗಮನ: ಮೇಜು ತಟ್ಟಿ ಸ್ವಾಗತಿಸಿದ ಸದನ

ಮೂರು ತಿಂಗಳ ನಂತರ ಮೊದಲ ಬಾರಿಗೆ ಲೋಕಸಭಾ ಕಲಾಪಕ್ಕೆ ಹಾಜರಾದ ಸುಷ್ಮಾ ಸ್ವರಾಜ್ ಅವರನ್ನು ಸದನದ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸುಮಾರು ಮೂರು ತಿಂಗಳ ನಂತರ ಮೊದಲ ಬಾರಿಗೆ ಮಾ.15 ರಂದು ಲೋಕಸಭಾ ಕಲಾಪಕ್ಕೆ ಹಾಜರಾಗಿದ್ದರು. ಆರೋಗ್ಯ ಚೇತರಿಕೆಯ ನಂತರ ಕಲಾಪಕ್ಕೆ ಆಗಮಿಸಿದ ಸುಷ್ಮಾ ಸ್ವರಾಜ್ ಅವರನ್ನು ಸದನದ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು. 
ಸಂಸತ್ ನ ಲೋಕಸಭಾ ಕಲಾಪದ ಪ್ರಶ್ನೋತ್ತರ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರೊಂದಿಗೆ ಸುಷ್ಮಾ ಸ್ವರಾಜ್ ಸಹ ಸದನಕ್ಕೆ ಆಗಮಿಸಿದರು. ಸುಷ್ಮಾ ಸ್ವರಾಜ್ ಆಗಮಿಸುತ್ತಿದ್ದಂತೆಯೇ ಮಾತನಾಡಿದ ಲೋಕಸಭಾ ಸ್ಪೀಕರ್ "ಸದನದ ಪರವಾಗಿ ನಿಮ್ಮನ್ನು ಸ್ವಾಗತಿಸುತ್ತೇನೆ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ. 
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ "ಸದನಕ್ಕೆ ಸ್ವಾಗತಿಸುತ್ತೇವೆ. ದೇಶಕ್ಕೆ ಮತ್ತಷ್ಟು ಸೇವೆ ಮಾಡುತ್ತೀರಿ ಎಂಬ ನಂಬಿಕೆ ಇದೆ" ಎಂದಿದ್ದಾರೆ. ಸುಷ್ಮಾ ಸ್ವರಾಜ್ ಆಸೀನರಾದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಜೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವ ಸದಾನಂದ ಗೌಡ ಆರೋಗ್ಯ ವಿಚಾರಿಸಿದರು. ಸದಸ್ಯರ ಸ್ವಾಗತಕ್ಕೆ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್ "ನಿಮ್ಮ ಹಾರೈಕೆಗೆ ಧನ್ಯವಾದಗಳು, ಎಲ್ಲಕ್ಕಿಂತ ಹೆಚ್ಚಾಗಿ ಭಗವಾನ್ ಕೃಷ್ಣನ ಕೃಪೆಯಿಂದ ಸದನದಲ್ಲಿ ಮತ್ತೆ ಹಾಜರಾಗಿದ್ದೇನೆ" ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com