ಲೋಕಸಭೆ: ಸಾಂಪ್ರದಾಯಿಕ ಔಷಧಗಳ ಸುಧಾರಣೆ ಕುರಿತು ಚರ್ಚೆ

ಮಾ.18 ರಂದು ಲೋಕಸಭಾ ಕಲಾಪದಲ್ಲಿ ಸಾಂಪ್ರದಾಯಿಕ ಔಷಧಗಳ ಸುಧಾರಣೆಯ ಬಗ್ಗೆ ಚರ್ಚೆ ನಡೆದಿದೆ.
ಸಂಸತ್ (ಸಂಗ್ರಹ ಚಿತ್ರ)
ಸಂಸತ್ (ಸಂಗ್ರಹ ಚಿತ್ರ)
ನವದೆಹಲಿ: ಮಾ.18 ರಂದು ಲೋಕಸಭಾ ಕಲಾಪದಲ್ಲಿ ಸಾಂಪ್ರದಾಯಿಕ ಔಷಧಗಳ ಸುಧಾರಣೆಯ ಬಗ್ಗೆ ಚರ್ಚೆ ನಡೆದಿದೆ. ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ಈ ಬಗ್ಗೆ ಚರ್ಚೆ ನಡೆದಿದ್ದು, ಆಯುಷ್ ಸೌಲಭ್ಯಗಳನ್ನು ಆಲೋಪಥೀಯ ಆಸ್ಪತ್ರೆಗಳಲ್ಲೂ ಪರಿಚಯಿಸಲಿದ್ದೀರಾ ಎಂದು ಕಾಂಗ್ರೆಸ್ ಸಂಸದ ಎಸ್‌.ಪಿ ಮುದ್ದಹುನುಮೇಗೌಡ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ. 
ಕಾಂಗ್ರೆಸ್ ಸಂಸದರ ಪ್ರಶ್ನೆಗೆ ಉತ್ತರಿಸಿರುವ ಆಯುಷ್ ಇಲಾಖೆಯ ರಾಜ್ಯ ಸಚಿವ ಶ್ರೀಪಾದ ಯಸ್ಸೊನಾಯಕ್‌ ಮಾಹಿತಿ ನೀಡಿದ್ದು, ಈ ವಿಷಯವಾಗಿ ಕೇಂದ್ರ ಸರ್ಕಾರ ಕಾರ್ಯನಿರತವಾಗಿದ್ದು, ರಾಜ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಯುಷ್ ಸೌಲಭ್ಯಗಳನ್ನು ನೀಡುವುದಕ್ಕಾಗಿ 20 ಲಕ್ಷ ಅನುದಾನ ನೀಡುತ್ತಿದ್ದೇವೆ ಎಂದಿದ್ದಾರೆ. 
ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ಸೌಲಭ್ಯ ನೀಡುವುದಷ್ಟೇ ಅಲ್ಲದೇ ಶಿಕ್ಷಣ ಪದ್ಧತಿಯಲ್ಲಿ ಆಯುರ್ವೇದದ ನಾಡಿ-ಪರೀಕ್ಷಣ ವ್ಯವಸ್ಥೆಯನ್ನೂ ಪರಿಚಯಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀಪಾದ್ ಯಸ್ಸೋನಾಯಕ್ ತಿಳಿಸಿದ್ದಾರೆ. 
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸಂಸದ ಪ್ರಹ್ಲಾದ್ ಸಿಂಗ್ ಪಟೇಲ್, ಸಾಂಪ್ರದಾಯಿಕ ರೀತಿಯಾದ ಕ್ರಮಗಳಿಂದ ರೋಗವನ್ನು ಪತ್ತೆ ಹಚ್ಚುವುದು ಆಧುನಿಕ ವ್ಯವಸ್ಥೆಯಿಂದ ಮಾನ್ಯತೆ ಪಡೆದಿಲ್ಲ, ಆದರೂ ಸಾಂಪ್ರದಾಯಿಕ ರೀತಿಯಾದ ಕ್ರಮಗಳನ್ನು ಉತ್ತೇಜಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗಳು ಜೀವನಶೈಲಿ ಬದಲಾವಣೆಯಿಂದ ಉಂಟಾಗುತ್ತಿದ್ದು, ಇಂತಹ ಸಮಸ್ಯೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಆಯುರ್ವೇದ ಔಷಧ ನೀಡುತ್ತದೆ. ಯೋಗಾ ಹಾಗೂ ಪ್ರಕೃತಿ ಚಿಕಿತ್ಸೆ ಮೂಲಕ ಔಷಧಗಳನ್ನು ಪಡೆದರೆ ಜೀವನಶೈಲಿಯಿಂದ ಉಂಟಾಗುವ ಸಮಸ್ಯೆಗಳನ್ನು ತಡೆಗಟ್ಟಬಹುದೆಂದು ಕೇಂದ್ರ ಸರ್ಕಾರ ಹೇಳಿದೆ. 
ತಮಿಳುನಾಡಿನಲ್ಲಿ 276 ಆಯುಷ್ ಆಸ್ಪತ್ರೆಗಳಿದ್ದು, 2 ಆಯುರ್ವೇದ ಹಾಗೂ ಒಂದು ಹೋಮಿಯೋಪಥಿ ಆಸ್ಪತ್ರೆಗಳಾಗಿದ್ದರೆ ಉಳಿದಿದ್ದು ಸಿದ್ಧ ಚಿಕಿತ್ಸಾ ಪದ್ಧತಿಯ ಆಸ್ಪತ್ರೆಗಳಾಗಿವೆ. ಜೆನೆರಿಕ್ ಔಷಧಗಳನ್ನು ನೀಡುವುದಕ್ಕಾಗಿ ಪ್ರಾರಂಭಿಸಲಾಗಿರುವ 3,000 ಔಷಧ ಮಳಿಗೆಗಳಲ್ಲೇ ಆಯುಷ್ ಔಷಧಗಳನ್ನೂ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಆಯುರ್ವೇದದ ಔಷಧಗಳನ್ನು ರಫ್ತು ಮಾಡುವುದಕ್ಕೂ ಸಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com