ಉತ್ತರಾಖಂಡ್ ಸಿಎಂ ಆಯ್ಕೆ: ತ್ರಿವೇಂದ್ರ ಸಿಂಗ್ ರಾವತ್ ಹೆಸರು ಮುಂಚೂಣಿಯಲ್ಲಿ

ಉತ್ತರಾಖಂಡ್ ರಾಜ್ಯಕ್ಕೆ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ತ್ರಿವೇಂದ್ರ ಸಿಂಗ್ ರಾವತ್
ತ್ರಿವೇಂದ್ರ ಸಿಂಗ್ ರಾವತ್
ನವದೆಹಲಿ: ಬಿಜೆಪಿ ಹೈಕಮಾಂಡ್ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿರತವಾಗಿದ್ದು, ಉತ್ತರಾಖಂಡ್ ರಾಜ್ಯಕ್ಕೆ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. 
ಮಾ.17 ರಂದು ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಶಾಸಕಾಂಗ ಪಕ್ಷದ ಮುಖ್ಯಸ್ಥನನ್ನಾಗಿ ನೇಮಕ ಮಾಡಿ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎಲ್ಲವೂ ನಿರೀಕ್ಷೆಯಂತೆಯೇ ನಡೆದರೆ ಮಾ.18 ರಂದು ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 
ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯೂ ಬಿರುಸಿನಿಂದ ಸಾಗಿದ್ದು ಮಾ.18 ರಂದು ಉತ್ತರ ಪ್ರದೇಶ ಶಾಸಕರು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸಚಿವ ಎಂ ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ವೀಕ್ಷಕರಾಗಿ ಭಾಗವಹಿಸಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಮನೋಜ್ ಸಿನ್ಹಾ ಸಿಎಂ ರೇಸ್ ನಲ್ಲಿದ್ದಾರೆ. 
ಯಾರಿದು ತ್ರಿವೇಂದ್ರ ಸಿಂಗ್ ರಾವತ್ 
ಉತ್ತರಾಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್ ರಾವತ್ ಹೆಸರು ಕೇಳಿಬರುತ್ತಿದ್ದು, ಆರ್ ಎಸ್ಎಸ್ ನ ಹಿನ್ನೆಲೆಯುಳ್ಳವರಾಗಿದ್ದು, ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುವ ಮುನ್ನ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಬಗ್ಗೆ ದೆಹಲಿಯಲ್ಲಿರುವ ಬಿಜೆಪಿ ನಾಯಕರು ತ್ರಿವೇಂದ್ರ ಸಿಂಗ್ ರಾವತ್ ಗೆ ಈಗಾಗಲೇ ಮಾಹಿತಿ ನೀಡಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com