ಭಾರತೀಯ ರೈಲ್ವೆ ವಿರುದ್ಧದ ಕಾನೂನು ಹೋರಾಟದಲ್ಲಿ ರೈಲು ಗೆದ್ದ ಪಂಜಾಬ್ ರೈತ

ರೈಲ್ವೆ ಟ್ರಾಕ್ ನಿರ್ಮಾಣಕ್ಕಾಗಿ ಜಮೀನು ನೀಡಿದ್ದ ಪಂಜಾಬ್ ರೈತ ಸೂಕ್ತ ಪರಿಹಾರಕ್ಕಾಗಿ ಭಾರತೀಯ ರೈಲ್ವೆ ವಿರುದ್ಧ ನಡೆಸಿದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲೂಧಿಯಾನ: ರೈಲ್ವೆ ಟ್ರಾಕ್ ನಿರ್ಮಾಣಕ್ಕಾಗಿ ಜಮೀನು ನೀಡಿದ್ದ ಪಂಜಾಬ್ ರೈತ ಸೂಕ್ತ ಪರಿಹಾರಕ್ಕಾಗಿ ಭಾರತೀಯ ರೈಲ್ವೆ ವಿರುದ್ಧ ನಡೆಸಿದ ಕಾನೂನು ಹೋರಾಟದಲ್ಲಿ ಕಡೆಗೂ ಜಯ ಸಿಕ್ಕಿದ್ದು, ಕೋರ್ಟ್ ಆತನಿಗೆ ರೈಲನ್ನೇ ಪರಿಹಾರವಾಗಿ ನೀಡಿದೆ.
ಪಂಜಾಬ್ ನ ಉತ್ತರ ಭಾಗದಲ್ಲಿ ಹೊಸ ಟ್ರಾಕ್ ನಿರ್ಮಾಣಕ್ಕಾಗಿ ಭಾರತೀಯ ರೈಲ್ವೆ ಸಂಪೂರಣ್ ಸಿಂಗ್ ಎಂಬುವವರ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ ಅದಕ್ಕೆ ಸೂಕ್ತ ಪರಿಹಾರ ನೀಡಿರಲಿಲ್ಲ. ಹೀಗಾಗಿ ಸಂಪೂರಣ್ ಸಿಂಗ್ ಅವರು ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು.
2015ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನೀಡಿದ ಆದೇಶದಂತೆ ಉತ್ತರ ರೈಲ್ವೆಯಿಂದ ಸಂಪೂರಣ್ ಸಿಂಗ್ ಅವರಿಗೆ 1.05 ಕೋಟಿ ರುಪಾಯಿ ಪರಿಹಾರ ಬಿಡುಗಡೆಯಾಗಬೇಕಿತ್ತು. ಆದರೆ ರೈಲ್ವೆ ಇಲಾಖೆ ಪರಿಹಾರ ನೀಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸಿಂಗ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಸ್ಪಾಲ್ ವರ್ಮಾ ಅವರು 12030 ಸಂಖ್ಯೆಯ ರೈಲನ್ನು ಸಂಪೂರಣ್ ಸಿಂಗ್ ವಶಕ್ಕೆ ನೀಡಿ ಆದೇಶಿಸಿತ್ತು. ಅಲ್ಲದೆ ಲೂಧಿಯಾನ ರೈಲ್ವೆ ನಿಲ್ದಾಣದರುವ ಸ್ಟೇಷನ್ ಮಾಸ್ಟರ್ ಕಚೇರಿ ಮುಟ್ಟುಗೋಲಿಗೂ ಕೋರ್ಟ್ ಆದೇಶಿಸಿದೆ.
ಏನಿದು ಪ್ರಕರಣ?: 2007 ರಲ್ಲಿ ಚಂಡೀಘಡ-ಲೂಧಿಯಾನ ರೈಲು ಮಾರ್ಗಕ್ಕಾಗಿ ಸಂಪೂರಣ್ ಸಿಂಗ್ ರ ಜಮೀನನ್ನು ರೈಲ್ವೇ ಇಲಾಖೆ ಭೂಸ್ವಾಧೀನ ಮಾಡಿಕೊಂಡಿತ್ತು. ಪ್ರತಿ ಎಕರೆಗೆ ರೈಲ್ವೇ ಇಲಾಖೆ 25 ಲಕ್ಷ ರೂ. ಗಳನ್ನು ನಿಗದಿಪಡಿಸಿದ್ದು, ನ್ಯಾಯಾಲಯದ ಮೊರೆ ಹೋದ ವೇಳೆ ಈ ಮೊತ್ತ 50 ಲಕ್ಷಕ್ಕೇರಿತ್ತು. ಆ ಪ್ರಕಾರ ಸಂಪೂರಣ್ ಸಿಂಗ್ ರಿಗೆ ರೈಲ್ವೇ ಇಲಾಖೆ 1.05 ಕೋಟಿ ರುಪಾಯಿಗಳ ಪರಿಹಾರ ನೀಡಬೇಕಿತ್ತು.
ಆದರೆ ರೈಲ್ವೇ ಇಲಾಖೆ ಕೇವಲ 42 ಲಕ್ಷ ರುಪಾಯಿಗಳನ್ನು ನೀಡಿದ್ದು, ಇದನ್ನು ಪ್ರಶ್ನಿಸಿ ಸಂಪೂರಣ್ ಸಿಂಗ್ 2012 ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. 2015 ರಲ್ಲಿ ತೀರ್ಪು ಹೊರ ಬಿದ್ದಿದ್ದು, ಆದರೆ ರೈಲ್ವೇ ಇಲಾಖೆ ಈ ಮೊತ್ತವನ್ನು ಪಾವತಿಸಲು ವಿಫಲವಾಗಿತ್ತು. ಅಂತಿಮವಾಗಿ ಮತ್ತೊಮ್ಮೆ ಸಂಪೂರಣ್ ಸಿಂಗ್ ನ್ಯಾಯಾಲಯದ ಮೊರೆ ಹೋಗಿದ್ದು, ಅಮೃತ್ಸರ- ನವದೆಹಲಿ ನಡುವೆ ಸಂಚರಿಸುವ ಸ್ವರ್ಣ ಶತಾಬ್ದಿ ರೈಲಿನ ಮುಟ್ಟುಗೋಲಿಗೆ ನ್ಯಾಯಾಲಯ ಆದೇಶಿಸಿದ್ದು, ರೈಲನ್ನು ಲೂಧಿಯಾನ ರೈಲು ನಿಲ್ದಾಣದಲ್ಲಿ ಐದು ನಿಮಿಷಗಳ ಕಾಲ ತಡೆದು ನಿಲ್ಲಿಸಿದ್ದ ಸಂಪೂರಣ್ ಸಿಂಗ್ ಪ್ರಯಾಣಿಕರಿಗೆ ತೊಂದರೆಯಾಗುತ್ತದೆಂಬ ಕಾರಣಕ್ಕೆ ಬಿಟ್ಟು ಕಳುಹಿಸಿದ್ದಾರೆ. ತಮಗೆ ಬರಬೇಕಿದ್ದ ಪರಿಹಾರ ಬಂದರಷ್ಟೇ ಸಾಕು ಎಂದು ಸಂಪೂರಣ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com