ಸಮಾಜವಾದಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸೂಚನೆ ನೀಡಿದ ಅಖಿಲೇಶ್ ಯಾದವ್

ಸಮಾಜವಾದಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಊಹಾಪೋಹಕ್ಕೆ ಮಾಜಿ ಮುಖ್ಯಮಂತ್ರಿ...
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
ಲಕ್ನೋ: ಸಮಾಜವಾದಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಊಹಾಪೋಹಕ್ಕೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪುಷ್ಠಿ ನೀಡಿದ್ದಾರೆ.
ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಸೆಪ್ಟೆಂಬರ್ 30ರೊಳಗೆ ಆಯ್ಕೆ ಮಾಡಲಾಗುವುದು. ನಾವು ನಮ್ಮ ನ್ಯೂನತೆಗಳನ್ನು ಸರಿಪಡಿಸುವಲ್ಲಿ ಕೆಲಸ ಮಾಡುತ್ತೇವೆ ಎಂದು ಅಖಿಲೇಶ್ ಯಾದವ್ ತಿಳಿಸಿದರು. ಇತ್ತೀಚಿನ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲು ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ತಾವು ಮತ್ತು ತಮ್ಮ ಪಕ್ಷ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿದ್ದು, ಅದರಿಂದ ಆಚೆ ಬರಲು ಶ್ರಮಿಸುತ್ತೇವೆ ಎಂದರು.
ನಾನು ಮತ್ತು ನಮ್ಮ ಪಕ್ಷದ ಕಾರ್ಯಕರ್ತರು, ನಾಯಕರು ಚುನಾವಣೆಯಲ್ಲಿ ಉಂಟಾದ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿದ್ದು, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರತರಾಗಿದ್ದೇವೆ. ಏಪ್ರಿಲ್ 15ರಿಂದ ನಮ್ಮ ಸದಸ್ಯತ್ವ ಅಭಿಯಾನ ಆರಂಭವಾಗಲಿದೆ. ಅದು ಇಡೀ ಉತ್ತರ ಪ್ರದೇಶದಾದ್ಯಂತ ನಡೆಯಲಿದೆ.ಆ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದರು.
ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಸಮಾಜವಾದಿ ಪಕ್ಷ ಹೀನಾಯ ಸೋಲು ಕಂಡಿತ್ತು. 
ಇದೇ ಸಂದರ್ಭದಲ್ಲಿ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ತಾವು 2022ರಲ್ಲಿ ಮತ್ತೆ ಸರ್ಕಾರ ರಚಿಸಿದಾಗ ಎಲ್ಲಾ ಸರ್ಕಾರಿ ಕಚೇರಿಗಳನ್ನು ಶುದ್ಧಗೊಳಿಸಲು ಗಂಗಾಜಲ ಚಿಮುಕಿಸುವುದಾಗಿ ಹೇಳಿದರು.
2022ರಲ್ಲಿ ನಾವು ಮತ್ತೆ ಸರ್ಕಾರ ರಚಿಸುತ್ತೇವೆ. ಆಗ 5 ಕಾಳಿದಾಸ ಮಾರ್ಗಕ್ಕೆ ಮಾತ್ರವಲ್ಲದೆ ಎಲ್ಲಾ ಸರ್ಕಾರಿ ಕಚೇರಿಗಳಿಗೂ ಗಂಗಾಜಲ ಚಿಮುಕಿಸಿ ಮಲಿನವಾಗಿರುವ ಕಚೇರಿಗಳನ್ನು ಶುದ್ಧಗೊಳಿಸುತ್ತೇವೆ ಎಂದಾಗ ಅಲ್ಲಿ ನೆರೆದಿದ್ದವರು ನಗೆಗಡಲಲ್ಲಿ ತೇಲಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲೋಕಸಭೆಯಲ್ಲಿ ತಮ್ಮ ಕೊನೆಯ ಭಾಷಣ ಮಾಡುವಾಗ ಅಖಿಲೇಶ್ ಯಾದವ್ ಅವರ ವಯಸ್ಸಿನ ಬಗ್ಗೆ ಮಾತನಾಡಿದ್ದನ್ನು ಪ್ರಸ್ತಾಪಿಸಿದ ಅಖಿಲೇಶ್, ತಾವು ಯೋಗಿ ಆದಿತ್ಯನಾಥ್ ಅವರಿಗಿಂತ ಸಣ್ಣವರಾದರೂ ಕೂಡ ಅನುಭವದಲ್ಲಿ ಹಿರಿಯರು ಎಂದು ಹೇಳಿದರು.
ಖಂಡಿತಾ ಅವರು ನನಗಿಂತ ಹಿರಿಯರು. ಆದರೆ ಕೆಲಸದ ವಿಚಾರ ಬಂದಾಗ ನನಗಿಂತ ಅವರು ತುಂಬಾ ಚಿಕ್ಕವರು. ಅಕ್ರಮ ಕಸಾಯಿಖಾನೆ ಮುಚ್ಚುವಿಕೆ, ಅಕ್ರಮ ಮಾಂಸದಂಗಡಿಗಳ ಬಂದ್ ಇತ್ಯಾದಿ ಘಟನೆಗಳು ಉತ್ತರ ಪ್ರದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಯೋಗಿಯವರ ಚಿತ್ರವನ್ನು ಹಾಕಿಕೊಂಡು ಈ ವಿಷಯಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಹಿಂದೆ ನನ್ನ ಚಿತ್ರ ಬಳಸಿಕೊಂಡು ಮಾಧ್ಯಮಗಳು ವರದಿ ನೀಡುತ್ತಿದ್ದವು. ಅದೇ ರೀತಿ ಈಗ ನಡೆಯುತ್ತಿದೆಯೇ ಹೊರತು ಹೆಚ್ಚಿನ ವಿಶೇಷವಿಲ್ಲ ಎಂದರು.
ಮತಪತ್ರಗಳ(ಬ್ಯಾಲಟ್) ಮೂಲಕ ವಿಧಾನಸಭೆ ಹಾಗೂ ಲೋಕಸಭೆಗಳ ಚುನಾವಣೆಗಳನ್ನು ನಡೆಸಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದರು.
ಇತ್ತೀಚಿನ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕೇವಲ 47 ಸೀಟುಗಳನ್ನು ಗೆದ್ದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com