ಅಯೋಧ್ಯಾ ಭೂ ವಿವಾದ: ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಅಯೋಧ್ಯಾ ರಾಮ ಮಂದಿರ-ಬಾಬ್ರಿ ಮಸೀದಿ ವಿವಾದದ ವಿಚಾರಣೆಯನ್ನು ತ್ವರಿತವಾಗಿ ನಡೆಯಲು...
ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ
ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ
ನವದೆಹಲಿ: ಅಯೋಧ್ಯಾ ರಾಮ ಮಂದಿರ-ಬಾಬ್ರಿ ಮಸೀದಿ ವಿವಾದದ ವಿಚಾರಣೆಯನ್ನು ತ್ವರಿತವಾಗಿ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಇಂದು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಅವರನ್ನೊಳಗೊಂಡ ನ್ಯಾಯಪೀಠ, ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ಈ ವಿವಾದದ ಕಕ್ಷಿಗಾರ ಎಂದು ಪರಿಗಣಿಸುತ್ತದೆ ಎಂದು ಹೇಳಿದೆ.
ಈ ಕೇಸಿನಲ್ಲಿ ನೀವು ಕಕ್ಷಿಗಾರ ಎಂದು ಹೇಳಿಲ್ಲ. ನಮಗೆ ಮಾಧ್ಯಮಗಳಿಂದ ಮಾತ್ರ ಗೊತ್ತಾಯಿತು ಎಂದು ನ್ಯಾಯಾಧೀಶರು ಹೇಳಿದರು. ಅದಕ್ಕೆ ಸುಬ್ರಹ್ಮಣ್ಯನ್ ಸ್ವಾಮಿ, ಪೂಜಿಸುವ ಮೂಲಭೂತ ಹಕ್ಕಿನ ಬಗ್ಗೆ ನಾನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇನೆ. ರಾಮ ಮಂದಿರ-ಬಾಬ್ರಿ ಮಸೀದಿ ವಿವಾದ ಕೋರ್ಟ್ ನಲ್ಲಿ ಹಲವು ವರ್ಷಗಳಿಂದ ಇರುವುದರಿಂದ ನನ್ನ ಪ್ರಾರ್ಥನೆ ಸಲ್ಲಿಸುವ ಹಕ್ಕಿನ ಮೇಲೆ ಪರಿಣಾಮ ಬೀರಿದೆ. ಇದಕ್ಕಾಗಿ ನಾನು ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ನ್ಯಾಯಪೀಠ, ವಿಚಾರಣೆಯನ್ನು ತ್ವರಿತವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿತು. ಇದಕ್ಕೂ ಮುನ್ನ ಮೊನ್ನೆ 21ರಂದು ಸುಪ್ರೀಂ ಕೋರ್ಟ್, ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದವನ್ನು ಕೋರ್ಟ್ ಹೊರಗೆ ಇತ್ಯರ್ಥಪಡಿಸುವಂತೆ ಸಲಹೆ ನೀಡಿತ್ತು. ಧಾರ್ಮಿಕತೆ ಮತ್ತು ಭಾವನೆಗಳಿಗೆ ಸಂಬಂಧಪಟ್ಟ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸುವುದು ಉತ್ತಮ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com