ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಗೆ ಬ್ರೇಕ್ ಹಾಕಲು 'ಮಹಾಮೈತ್ರಿ' ರಚನೆ: ಲಾಲು

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಡೆಯನ್ನು ಕಟ್ಟಿಹಾಕುವುದಕ್ಕಾಗಿ 'ಮಹಾ ಮೈತ್ರಿ' ರಚನೆ ಮಾಡುವುದಾಗಿ....
ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್
ರಾಜಗಿರ್(ಬಿಹಾರ): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಡೆಯನ್ನು ಕಟ್ಟಿಹಾಕುವುದಕ್ಕಾಗಿ 'ಮಹಾ ಮೈತ್ರಿ' ರಚನೆ ಮಾಡುವುದಾಗಿ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಬುಧವಾರ ಹೇಳಿದ್ದಾರೆ.
ಇಂದು ರಾಜಗಿರ್ ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಲಾಲು ಪ್ರಸಾದ್ ಯಾದವ್ ಅವರು, 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಗೆ ಬ್ರೇಕ್ ಹಾಕಲು ಮಹಾಮೈತ್ರಿ ರಚಿಸುವುದಾಗಿ ಹೇಳಿದ್ದಾರೆ.
ಕಳೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಚಿಸಲಾಗಿದ್ದ ಮಹಾಘಟಬಂಧನ್ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಮಹಾ ಮೈತ್ರಿ ರಚಿಸಲಾಗುವುದು ಎಂದು ಲಾಲು ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಹಾಗೂ ಬೀಜು ಪಟ್ನಾಯಕ್ ಸೇರಿದಂತೆ ಹಲವು ಸಮಾಜವಾದಿ ನಾಯಕರಿಗೆ ಆಹ್ವಾನ ನೀಡುವುದಾಗಿ ತಿಳಿಸಿದ್ದಾರೆ.
ನಮ್ಮಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಕೋಮುವಾದಿಗಳ ವಿರುದ್ಧ ನಾವು ಒಂದಾದರೇ ಗೆಲುವು ಖಚಿತ ಎಂಬುದಕ್ಕೆ ಬಿಹಾರದ ಮಹಾಘಟಬಂಧನ್ ಸಾಕ್ಷಿ ಎಂದು ಆರ್ ಜೆಡಿ ಮುಖ್ಯಸ್ಥ ಹೇಳಿದ್ದಾರೆ.
ಇದೇ ವೇಳೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಹಾಗೂ ತಮ್ಮ ಮಧ್ಯ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಲಾಲು ಪ್ರಸಾದ್ ಯಾದವ್ ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com