ನವದೆಹಲಿ: ನಿಮ್ಮ ದೂರವಾಣಿ ಕರೆಗಳ ಗುಣಮಟ್ಟ ಅಳೆಯುವುದಕ್ಕಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಶೀಘ್ರದಲ್ಲೇ ಮೊಬೈಲ್ ಆಪ್ ವೊಂದನ್ನು ಬಿಡುಗಡೆ ಮಾಡುವುದಾಗಿ ಶುಕ್ರವಾರ ಹೇಳಿದೆ.
ನೀವು ಮಾಡಿದ ಕರೆ ಪೂರ್ಣಗೊಂಡ ನಂತರ ಅದರ ಗುಣಮಟ್ಟ ಹೇಗಿತ್ತು ಎಂಬುದನ್ನು ತಿಳಿಸಲು ಟ್ರಾಯ್ ಈ ಆಪ್ ಅನ್ನು ಪರಿಚಯಿಸುತ್ತಿದ್ದು, 'ಮೈಕಾಲ್' ಎಂಬ ಹೆಸರಿನ ಈ ಆಪ್ ಮೂಲಕ ಫೋನ್ ಕರೆ ಗುಣಮಟ್ಟದ ಬಗ್ಗೆ ಬಳಕೆದಾರರು ರೇಟಿಂಗ್ ಕೊಡಬಹುದು.
ಇನ್ನು 'Do Not Disturb' ವ್ಯವಸ್ಥೆ ಮೇಲೂ ಟ್ರಾಯ್ ಗಮನ ಹರಿಸಿದ್ದು, ಅದನ್ನು ಇನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಯೋಜನೆ ಸಿದ್ಧಪಡಿಸಿರುವುದಾಗಿ ಟ್ರಾಯ್ ತಿಳಿಸಿದೆ.
ಟ್ರಾಯ್ ಆರಂಭವಾಗಿ 20 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ಮಾನದಂಡಗಳೊಂದಿಗೆ ಗ್ರಾಹಕರ ಮುಂದೆ ಬರುತ್ತಿದ್ದೇವೆ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಹೇಳಿದ್ದಾರೆ.