ನವದೆಹಲಿ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ 2015 ಮತ್ತು 2016ರಲ್ಲಿ ಪ್ರತಿದಿನ ಕನಿಷ್ಠ ಒಂದು ಬಾರಿಯಾದರೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಎರಡು ವರ್ಷಗಳಲ್ಲಿ 23 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಇಲಾಖೆ ಜಮ್ಮು-ಕಾಶ್ಮೀರದಲ್ಲಿ 2012 ರಿಂದ 2016ರವರೆಗೆ 1,142 ಭಯೋತ್ಪಾದಕ ಘಟನೆಗಳು ವರದಿಯಾಗಿವೆ. ಇದರಲ್ಲಿ 236 ಮಂದಿ ಭದ್ರತಾ ಸಿಬ್ಬಂದಿ ಮತ್ತು 90 ನಾಗರಿಕರ ಹತ್ಯೆಯಾಗಿದೆ. ಇದೇ ಸಮಯದಲ್ಲಿ ಎನ್ ಕೌಂಟರ್ ನಲ್ಲಿ 507 ಮಂದಿ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಇಲಾಖೆಯ ವರದಿ ತಿಳಿಸಿದೆ.
2016ರಲ್ಲಿ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ 449 ಬಾರಿ ಉಲ್ಲಂಘನೆ ಮಾಡಿದೆ. 2015ರಲ್ಲಿ ಅದು 405 ಸಲವಾಗಿತ್ತು.
ನಿವೃತ್ತ ಮೇಜರ್ ಜನರಲ್ ಜಿ.ಡಿ.ಬಕ್ಷಿ, ಪಾಕಿಸ್ತಾನ ಭಾರತದ ವಿರುದ್ಧ ರಹಸ್ಯವಾಗಿ ಯುದ್ಧ ಮಾಡುತ್ತಿದೆ. ಪಾಕಿಸ್ತಾನ ಶಾಂತಿಯ ಬಗ್ಗೆ ಮಾತನಾಡುತ್ತಿದ್ದರೂ ಅದಕ್ಕೆ ಅದರ ಮೇಲೆ ನಂಬಿಕೆಯಿಲ್ಲ. ಅದಕ್ಕೆ ಜಮ್ಮು-ಕಾಶ್ಮೀರವೇ ಉದಾಹರಣೆ ಎಂದು ಹೇಳಿದ್ದಾರೆ.
2012ರಲ್ಲಿ ಜಮ್ಮು-ಕಾಶ್ಮೀರದ 220 ಭಯೋತ್ಪಾದಕ ಘಟನೆಗಳಿಗೆ ಹೋಲಿಸಿದರೆ 2016ರಲ್ಲಿ 322 ಘಟನೆಗಳು ನಡೆದಿವೆ. ಅವುಗಳಲ್ಲಿ 82 ಭದ್ರತಾ ಸಿಬ್ಬಂದಿ ಮತ್ತು 15 ನಾಗರಿಕರು ಮೃತಪಟ್ಟಿದ್ದಾರೆ ಎಂದು ಆರ್ ಟಿಐಯಲ್ಲಿ ಮಾಹಿತಿ ಸಿಕ್ಕಿದೆ.
2015ರಲ್ಲಿ 39 ಭದ್ರತಾ ಸಿಬ್ಬಂದಿ, 17 ನಾಗರಿಕರು ಒಟ್ಟು 208 ಭಯೋತ್ಪಾದಕ ಘಟನೆಗಳಲ್ಲಿ ಮೃತಪಟ್ಟಿದ್ದಾರೆ. 108 ಮಂದಿ ಭಯೋತ್ಪಾದಕರ ಹತ್ಯೆಯಾಗಿದೆ. 47 ಮಂದಿ ಭದ್ರತಾ ಸಿಬ್ಬಂದಿ, 28 ಮಂದಿ ನಾಗರಿಕರು ಮೃತಪಟ್ಟರೆ, 2014ರಲ್ಲಿ 110 ಭಯೋತ್ಪಾದಕರು ಮೃತಪಟ್ಟಿದ್ದಾರೆ.
2012ರಲ್ಲಿ 15 ಭದ್ರತಾ ಸಿಬ್ಬಂದಿ, ಹಲವು ನಾಗರಿಕರು ಮೃತಪಟ್ಟಿದ್ದು 220 ಭಯೋತ್ಪಾದಕ ಘಟನೆಗಳು ಮತ್ತು 72 ಮಂದಿ ಭಯೋತ್ಪಾದಕರು ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದಾರೆ.
2013ರಲ್ಲಿ 53 ಮಂದಿ ಭದ್ರತಾ ಸಿಬ್ಬಂದಿ, 15 ನಾಗರಿಕರು ಮೃತಪಟ್ಟು, 170 ಭಯೋತ್ಪಾದಕ ಕೃತ್ಯಗಳು ನಡೆದಿವೆ. 67 ಮಂದಿ ಭಯೋತ್ಪಾದಕರು ಮೃತಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಒಂದು ಪ್ರದೇಶದಲ್ಲಿ ಸೇನೆ ಭಯೋತ್ಪಾದಕರನ್ನು ಸುತ್ತುವರಿದರೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹೋಗಿ ಸುತ್ತಮುತ್ತಲ ನಿವಾಸಿಗಳು ಸೇರುತ್ತಾರೆ. ಇದರಿಂದ ಕಾರ್ಯಾಚರಣೆ ಕುಂಠಿತವಾಗುತ್ತದೆ ಎಂದು ಬಕ್ಷಿ ಹೇಳುತ್ತಾರೆ.