ನೀಟ್ ಡ್ರೆಸ್ ಕೋಡ್: ಕಿವಿಯೋಲೆ, ಬಳೆ, ಒಳಉಡುಪು ತೆಗೆಸಿದರು; ಪೂರ್ತಿ ತೋಳಿನ ಅಂಗಿಗೂ ಕತ್ತರಿ ಹಾಕಿದರು!

"ನೀಟ್" ಆಗಿರಲಿಲ್ಲ ಎಂಬ ಕಾರಣ ವಿದ್ಯಾರ್ಥಿನಿಯರು ಧರಿಸಿದ್ದ ಕಿವಿಯೋಲೆ, ಬಳೆಯನ್ನು ತೆಗೆಸಲಾಯಿತು.
ನೀಟ್ ಡ್ರೆಸ್ ಕೋಡ್
ನೀಟ್ ಡ್ರೆಸ್ ಕೋಡ್
ಚೆನ್ನೈ: ವಿದ್ಯಾರ್ಥಿನಿಯರು ನೀಟ್ ಆಗಿ ತಲೆ ಬಾಚಿಕೊಂಡು, ಬಳೆ ತೊಟ್ಟಿದ್ದರು. ವಿದ್ಯಾರ್ಥಿಗಳು ಸಹ ನೀಟ್ ಆಗಿ ಪೂರ್ತಿ ತೋಳಿನ ಅಂಗಿ ಧರಿಸಿ ರಾಷ್ಟ್ರೀಯ ಅರ್ಹತೆ-ಪ್ರವೇಶ ಪರೀಕ್ಷೆ ಬರೆಯಲು ಬಂದಿದ್ದರು. ಆದರೆ ಅದು "ನೀಟ್" ಆಗಿರಲಿಲ್ಲ ಎಂಬ ಕಾರಣ ವಿದ್ಯಾರ್ಥಿನಿಯರು ಧರಿಸಿದ್ದ ಕಿವಿಯೋಲೆ, ಬಳೆಯನ್ನು ತೆಗೆಸಲಾಯಿತು. ಅಂತೆಯೇ ಹುಡುಗರು ಧರಿಸಿದ್ದ ಪೂರ್ತಿ ತೋಳಿನ ಅಂಗಿಗೂ ಕತ್ತರಿ ಹಾಕಿ ವಿದ್ಯಾರ್ಥಿಗಳ ಡ್ರೆಸ್ ಕೋಡ್ ನ್ನು 'ನೀಟ್' ಮಾಡಲಾಯಿತು. 
ಹೌದು ಇದು ಮೇ.07 ರಂದು ನಡೆದ ರಾಷ್ಟ್ರೀಯ ಅರ್ಹತೆ-ಪ್ರವೇಶ ಪರೀಕ್ಷೆಯಲ್ಲಿ ಕಂಡು ಬಂದ ಚಿತ್ರಣ. ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಕೈಗೊಂಡಿದ್ದ ಮುನ್ನೆಚ್ಚರಿಕಾ ಕ್ರಮಗಳಿಗೆ ಉದಾಹರಣೆ. ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಿದ್ದ ಭದ್ರತಾ ಅಧಿಕಾರಿಗಳು, ಬಳೆ ತೊಟ್ಟು, ಪೂರ್ತಿ ತೋಳಿಣ ಅಂಗಿ ಧರಿಸಿ ಬಂದಿದ್ದ ಪರೀಕ್ಷಾರ್ಥಿಗಳನ್ನು ಪರೀಕ್ಷಾ ಕೇಂದ್ರದ ಗೇಟ್ ನ ಮುಂಭಾಗದಲ್ಲಿಯೇ ತಡೆದು, ಈ ಡ್ರೆಸ್ ಕೋಡ್ ಪರೀಕ್ಷಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪರಿಕ್ಷಾರ್ಥಿಗಳ ಕಿವಿಯೋಲೆ, ಬಳೆ ತೆಗೆಸಿದರು; ಪೂರ್ತಿ ತೋಳಿನ ಅಂಗಿಗೂ ಕತ್ತರಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ಹೈಹೀಲ್ಸ್ ಚಪ್ಪಲಿ ಹಾಗೂ ಶೂಗಳನ್ನು ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶ ಇಲ್ಲದೇ ಇದ್ದಿದ್ದರಿಂದ ಅದೆಷ್ಟೋ ವಿದ್ಯಾರ್ಥಿಗಳು ಶೂ ತೆಗೆದು ಪರೀಕ್ಷಾ ಕೊಠಡಿಗೆ ತೆರಳಿ ಪರೀಕ್ಷೆ ಬರೆದಿದ್ದಾರೆ. 
ನೀಟ್ ಪರೀಕ್ಷೆಗೆ ಡ್ರೆಸ್ ಕೋಡ್ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಆದರೂ ಸಹ ಅನೇಕ ವಿದ್ಯಾರ್ಥಿಗಳು ಡ್ರೆಸ್ ಕೋಡ್ ನಿಯಮಗಳನ್ನು ಮೀರಿ ಪೂರ್ತಿ ತೋಳಿನ ಅಂಗಿ, ಕಿವಿಯೋಲೆ, ಬಳೆಗಳನ್ನು ಧರಿಸಿ ಬಂದಿದ್ದರು. ಪರಿಣಾಮವಾಗಿ ವಿದ್ಯಾರ್ಥಿನಿಯರು ಹೇರ್ ಬ್ಯಾಂಡ್ ನ್ನು ತೆಗೆದು ಪರೀಕ್ಷಾ ಕೊಠಡಿಗೆ ಪ್ರವೇಶಿಸಿದರೆ ವಿದ್ಯಾರ್ಥಿಗಳು ಶೂಗಳನ್ನು ತೆಗೆದು ಪರೀಕ್ಷಾ ಕೊಠಡಿಗೆ ಪ್ರವೇಶ ಮಾಡಬೇಕಾಯಿತು.
ಇಷ್ಟೇ ಅಲ್ಲ, ಭದ್ರತಾ ಅಧಿಕಾರಿಗಳು ಟಾರ್ಚ್ ಬಳಕೆ ಮಾಡಿ ವಿದ್ಯಾರ್ಥಿಗಳ ಕಿವಿಗಳನ್ನು ಪರೀಕ್ಷಿಸಿದ್ದು, ಯಾವುದಾದರು ಆಕ್ಷೇಪಾರ್ಹ ಪದಾರ್ಥಗಳು ಇರುವುದರ ಬಗ್ಗೆ ಪರಿಶೀಲನೆ ನಡೆಸಿದ್ದು, ಪರೀಕ್ಷೆಯಲ್ಲಿ ಕೈಗೊಳ್ಳಲಾಗಿದ್ದ ಮುನ್ನೆಚ್ಚರಿಕಾ, ಭದ್ರತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಅಚ್ಚರಿಗೊಳಗಾಗಿದ್ದರು. 
ಪುಣ್ಯಕ್ಕೆ ಸ್ಥಳದಲ್ಲಿಯೇ ಇದ್ದ ಪೋಷಕರೊಬ್ಬರು ಡ್ರೆಸ್ ಮೇಕರ್ ಆಗಿದ್ದರಿಂದ ವಿದ್ಯಾರ್ಥಿಗಳು ಅಂಗಿಯ ತೋಳನ್ನು ಕತ್ತರಿಸಿಕೊಳ್ಳುವುದಕ್ಕೆ ಸಮಸ್ಯೆ ಉಂಟಾಗಲಿಲ್ಲ. ಹತ್ತಿರದಲ್ಲೇ ಇದ್ದ ಪೋಷಕರ ಮನೆಯಿಂದ ಕತ್ತರಿ ತರಿಸಿಕೊಂಡೆ, ನಾನು ಡ್ರೆಸ್ ಮೇಕರ್ ಆಗಿದ್ದರಿಂದ ಪೂರ್ತಿ ತೋಳಿನ ಅಂಗಿ ಧರಿಸಿ ಬಂದಿದ್ದ ವಿದ್ಯಾರ್ಥಿಗಳ ಅಂಗಿಯ ತೋಳನ್ನು ಅರ್ಧಕ್ಕೆ ಕತ್ತರಿಸಲು ಸಾಧ್ಯವಾಯಿತು ಎಂದಿದ್ದಾರೆ ಪ್ರಿಯಾ.ಯು.
ಪರೀಕ್ಷಾ ಕೇಂದ್ರಗಳಲ್ಲಿನ ಡ್ರೆಸ್ ಕೋಡ್ ನ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಮೊದಲೇ ಒತ್ತಡದಲ್ಲಿರುತ್ತಾರೆ. ಡ್ರೆಸ್ ಕೋಡ್, ಅಂಗಿ ಕತ್ತರಿಸುವುದು, ಕಿವಿಯೋಲೆ ಕಳಚುವುದು, ಮತ್ತಷ್ಟು ಕಿರಿಕಿರಿ ಉಂಟುಮಾಡಿತ್ತು ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಡ್ರೆಸ್ ಕೋಡ್ ನ ಕಿರಿಕಿರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ತಹ್ಮೀನಾ, ನಾನು ಈಗಾಗಲೇ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಪರೀಕ್ಷೆ ಬರೆಯುವುದೇ ಬೇಡ ಎಂಬಂತಾಗಿತ್ತು. ಈ ನಿಯಮ ತೀರ ಅಸಬಂದ್ಧವಾದದ್ದು, ಈ ನಿಯಮಗಳ ಬಗ್ಗೆ ಏನು ಗೊತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಗೆ ಒಳ ಉಡುಪು ಕಳಚಲು ಹೇಳಿದರು!
ಇಂಥಹದ್ದೇ ಮತ್ತೊಂದು ಘಟನೆ ಕೇರಳದ ಕಣ್ಣೂರಿನಲ್ಲೂ ಬೆಳಕಿಗೆ ಬಂದಿದ್ದು, ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಗೆ  ಒಳ ಉಡುಪು ಕಳಚಲು ಹೇಳಿದರೆಂಬ ಆರೋಪ ಕೇಳಿಬಂದಿದೆ. ತನ್ನೊಂದಿಗೆ ಇದ್ದ ವಿದ್ಯಾರ್ಥಿನಿಯರಿಗೂ ಇದೇ ರೀತಿ ಹೇಳಲಾಯಿತು. 
ಪರೀಕ್ಷಾ ಕೇಂದ್ರದ ಒಳಗೆ ಹೋದ ನನ್ನ ಮಗಳಿಗೆ ಡ್ರೆಸ್ ಕೋಡ್ ಕಾರಣ ನೀಡಿ ಒಳ ಉಡುಪು ತೆಗೆಯುವಂತೆ ಹೇಳಿದರು ಎಂದು ಪೋಷಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಜೀನ್ಸ್ ಧರಿಸಿ ಬಂದಿದ್ದ ನನ್ನ ಮಗಳಿಗೆ ಜೀನ್ಸ್ ಪ್ಯಾಂಟ್ ನಲ್ಲಿದ್ದ ಜೇಬನ್ನು ಕತ್ತರಿಸುವಂತೆ ಹೇಳಿದ್ದು, ಮೆಟಲ್ ಬಟನ್ ಗಳನ್ನೂ ಸಹ ತೆಗೆಯುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 3 ಕಿಮೀ ದೂರ ಹೋಗಿ ಹೊಸ ಬಟ್ಟೆ ತಂದು ಕೊಟ್ಟೆ ಎಂದು ಪೋಷಕರು ಹೇಳಿದ್ದಾರೆ. ಒಟ್ಟಾರೆ ನೀಟ್ ಪರೀಕ್ಷೆಯಲ್ಲಿನ ಡ್ರೆಸ್ ಕೋಡ್ ನಿಯಮಗಳು ಪೋಷಕರು-ವಿದ್ಯಾರ್ಥಿಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com