ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಲಂಚ ಆರೋಪ ಮಾಡಿರುವ ದೆಹಲಿ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ದೆಹಲಿ ಸಿಎಂ ವಿರುದ್ಧದ 400 ಕೋಟಿ ರುಪಾಯಿ ನೀರಿನ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ಸಲ್ಲಿಸಿದ್ದಾರೆ.
ನಿನ್ನೆಯಷ್ಟೆ ಆರೋಗ್ಯ ಹಾಗೂ ಲೋಕೋಪಯೋಗಿ ಸಚಿವ ಸತ್ಯೇಂದರ್ ಜೈನ್ ಅವರು ಕೇಜ್ರಿವಾಲ್ ಅವರಿಗೆ ಅವರ ಮನೆಯಲ್ಲಿಯೇ ಎರಡು ಕೋಟಿ ರುಪಾಯಿ ಹಣ ನೀಡಿದ್ದನ್ನು ತಾವು ನೋಡಿದ್ದಾಗಿ ಹೇಳಿದ್ದ ಮಿಶ್ರಾ, ಇಂದು ನೀರಿನ ಟ್ಯಾಂಕರ್ ನಲ್ಲಿ 400 ಕೋಟಿ ರುಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿದ್ದರೆ.
ಶೀಲಾ ದಿಕ್ಷಿತ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ನಡೆದ 400 ಕೋಟಿ ರುಪಾಯಿಯ ನೀರಿನ ಟ್ಯಾಂಕರ್ ಹಗರಣದ ತನಿಖೆಗೆ ಸಿಎಂ ಕೇಜ್ರಿವಾಲ್ ಅವರು ಹಿಂದೇಟು ಹಾಕುತ್ತಿದ್ದು, ಈ ಮೂಲಕ ದೆಹಲಿ ಸಿಎಂ ಹಾಗೂ ಅವರ ಇಬ್ಬರು ವ್ಯಕ್ತಿಗಳು ಮಾಜಿ ಮುಖ್ಯಮಂತ್ರಿಯನ್ನು ರಕ್ಷಿಸುತ್ತಿದ್ದಾರೆ ಎಂದು ಮಿಶ್ರಾ ಆರೋಪಿಸಿದ್ದಾರೆ.
ನೀರಿನ ಟ್ಯಾಂಕರ್ ಹಗರಣದ ಸಂಪೂರ್ಣ ದಾಖಲೆಗಳನ್ನು ಎಸಿಬಿಗೆ ಒದಗಿಸಿದ್ದೇನೆ. ತನಿಖೆಗೆ ನಾನು ಸಹಕರಿಸುತ್ತೇನೆ. ಸಿಬಿಐ ಅಧಿಕಾರಿಗಳನ್ನು ಭೇಟಿ ಮಾಡುವ ಸಂಬಂಧ ಸಮಯ ಕೋರಿದ್ದೇನೆ. ಅವರಿಂದ ಪ್ರತಿಕ್ರಿಯೆ ಬಂದ ನಂತರ ದಾಖಲೆಗಳೊಂದಿಗೆ ಸಿಬಿಐ ಕಚೇರಿಗೆ ತೆರಳಿ ಸಂಪೂರ್ಣ ಮಾಹಿತಿ ಒದಗಿಸುತ್ತೇನೆ ಎಂದು ಕಪಿಲ್ ಮಿಶ್ರಾ ತಿಳಿಸಿದ್ದಾರೆ.
ಈ ಮೊದಲು ಹಗರಣದ ಕುರಿತು ಕಪಿಲ್ ಮಿಶ್ರಾ ಸಲ್ಲಿಸಿದ್ದ ದೂರನ್ನು ದೆಹಲಿಯ ಲೆ. ಗವರ್ನರ್ ಅನಿಲ್ ಬೈಜಪಾಲ್ ಎಸಿಬಿಗೆ ವರ್ಗಾಯಿಸಿದ್ದರು.
ಭಾನುವಾರ ಕಪಿಲ್ ಮಿಶ್ರಾ ಅವರನ್ನು ಕೇಜ್ರಿವಾಲ್ ತಮ್ಮ ಸಚಿವ ಸಂಪುಟದಿಂದ ಉಚ್ಛಾಟಿಸಿದ್ದರು. ಆ ನಂತರ ಸುದ್ದಿಗೋಷ್ಠಿ ನಡೆಸಿದ ಮಿಶ್ರಾ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಸಿಎಂ ಕೇಜ್ರಿವಾಲ್ ಅವರಿಗೆ 2 ಕೋಟಿ ರೂ. ಲಂಚ ನೀಡಿದ್ದಾರೆ. ಈ ಸಂಬಂಧ ನನ್ನ ಬಳಿ ದಾಖಲೆಗಳಿವೆ ಎಂದು ಆರೋಪ ಮಾಡಿದ್ದರು.
ದೆಹಲಿ ಬಿಜೆಪಿ ಘಟಕ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ದೆಹಲಿ ಲೋಕಾಯುಕ್ತಕ್ಕೆ ದೂರು ದಾಖಲಿಸಿದೆ. ಲೆ. ಗವರ್ನರ್ ಅವರನ್ನು ವಿರೋಧ ಪಕ್ಷದ ನಾಯಕರು ಭೇಟಿ ಮಾಡಿ ಹಗರಣದ ಕುರಿತು ದಾಖಲೆಗಳನ್ನು ಸಲ್ಲಿಸಲಿದ್ದೇವೆ ಎಂದು ಬಿಜೆಪಿ ವಕ್ತಾರ ರಾಜೀವ್ ಬಬ್ಬರ್ ತಿಳಿಸಿದ್ದಾರೆ.