ನವದೆಹಲಿ: ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ದೆಹಲಿ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ಭಾನುವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಪಿಲ್ ಮಿಶ್ರಾ, ಹಲವು ಕಂಪನಿಗಳ ಹಗರಣದ ಆರೋಪಿ ಶೀತಲ್ ಪ್ರಸಾದ್ ಸಿಂಗ್ ಅವರು ಆಮ್ ಆದ್ಮಿ ಪಕ್ಷದ ನಾಯಕರಾದ ಆಶುತೋಷ್ ಹಾಗೂ ಸಂಜಯ್ ಸಿಂಗ್ ಅವರ ರಷ್ಯಾ ಪ್ರವಾಸಕ್ಕೆ ಹಣಕಾಸಿನ ನೆರವು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷದ 4ರಿಂದ 5ಮಂದಿ ಭ್ರಷ್ಟರಿದ್ದು, ಅವರನ್ನು ಪಕ್ಷದಿಂದ ಹೊರ ಹಾಕುವ ಅಗತ್ಯವಿದೆ ಎಂದು ಮಾಜಿ ಸಚಿವ ಹೇಳಿದ್ದಾರೆ. ಅಲ್ಲದೆ ಆಶುತೋಷ್ ಮತ್ತು ಸಂಜಯ್ ಸಿಂಗ್ ಎಎಪಿಯನ್ನು ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಭ್ರಷ್ಟಾಚಾರ ಮುಕ್ತ ದೆಹಲಿಗಾಗಿ 'ಕ್ಲೀನ್ ಎಎಪಿ' ಆಂದೋಲನಕ್ಕೆ ಕೈ ಜೋಡಿಸುವಂತೆ ಕಪಿಲ್ ಮಿಶ್ರಾ ಕರೆ ನೀಡಿದ್ದಾರೆ.