ಭುವನೇಶ್ವರ: ಒಡಿಶಾದ ಆಡಳಿತರೂಢ ಬಿಜೆಡಿ ಸಂಸದ ಬೈಜಯಂತ್ ಪಾಂಡಾ ಅವರ ಮೇಲೆ ಪಕ್ಷದ ಕಾರ್ಯಕರ್ತರು ಮೊಟ್ಟೆ ಹಾಗೂ ಕಲ್ಲು ತೂರಿದ ಘಟನೆ ಅವರ ಸ್ವಕ್ಷೇತ್ರ ಕೇಂದ್ರಪದದಲ್ಲಿ ಮಂಗಳವಾರ ನಡೆದಿದೆ.
ಇಂದು ಜಾತಿಪರಿಲೊ ಗ್ರಾಮದಲ್ಲಿ ಓವರ್ಹೆಡ್ ವಾಟರ್ ಟ್ಯಾಂಕ್ ಯೋಜನೆ ಉದ್ಘಾಟಿಸುತ್ತಿದ್ದ ಸಂದರ್ಭದಲ್ಲಿ ಬಿಜೆಡಿ ಸಂಸದನ ಮೇಲೆ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟರ್ ಮೂಲಕ ಪ್ರತಿಕ್ರಿಯಿಸಿರುವ ಪಾಂಡಾ ಅವರು, ನಾನು ಮೊಟ್ಟೆ ಮತ್ತು ಕಲ್ಲು ತೂರಾಟಕ್ಕೆ ಹೆದರುವುದಿಲ್ಲ. ಕಲ್ಲು ಮತ್ತು ಮೊಟ್ಟೆಯನ್ನು ಬಿಟ್ಟಾಕಿ. ಅವರು ನನ್ನ ಮೇಲೆ ಗುಂಡಿನ ದಾಳಿ ನಡೆಸಿದರು ನಾನು ಜಗ್ಗುವುದಿಲ್ಲ ಎಂದಿದ್ದಾರೆ.
ಇದು ಒಳ್ಳೆಯ ಬೆಳವಣಿಗೆ ಅಲ್ಲ. ನಾನು ಈ ವಿಚಾರವನ್ನು ಪಕ್ಷದ ಮುಖ್ಯಸ್ಥ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಗಮನಕ್ಕೆ ತಂದಿದ್ದೇನೆ. ಅವರಿಗೆ ಸತ್ಯ ತಿಳಿದ ಮೇಲೆ ಅಶಿಸ್ತಿನಿಂದ ವರ್ತಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ ಎಂದಿದ್ದಾರೆ.