ವಿಜಯ್ ಮಲ್ಯ
ದೇಶ
ಫೆರಾ ಪ್ರಕರಣ: ಡಿ.18ಕ್ಕೆ ಖುದ್ದು ಹಾಜರಾಗಲು ವಿಜಯ್ ಮಲ್ಯ ಗೆ ದೆಹಲಿ ನ್ಯಾಯಾಲಯ ಸೂಚನೆ
ಮದ್ಯದ ದೊರೆ ವಿಜಯ್ ಮಲ್ಯ ಎಲ್ಲಿದ್ದರೂ ಡಿಸೆಂಬರ್ 18ರಂದು ನ್ಯಾಯಲಯಕ್ಕೆ ಹಾಜರಾಗಬೇಕೆಂದು ದೆಹಲಿಯ ಪಟಿಯಾಲಾ ಕೋರ್ಟ್ ನಿರ್ದೇಶನ ನೀಡೀದೆ.
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಎಲ್ಲಿದ್ದರೂ ಡಿಸೆಂಬರ್ 18ರಂದು ನ್ಯಾಯಲಯಕ್ಕೆ ಹಾಜರಾಗಬೇಕೆಂದು ದೆಹಲಿಯ ಪಟಿಯಾಲಾ ಕೋರ್ಟ್ ನಿರ್ದೇಶನ ನೀಡೀದೆ. ಒಂದು ವೇಳೆ ಆ ದಿನ ಅವರು ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದಲ್ಲಿ ಅವರನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಲಾಗುವುದು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿದೇಶಿ ವಿನಿಯಮ ನಿಯಂತ್ರಣ ಕಾಯ್ದೆ (ಫೆರಾ ) ಉಲ್ಲಂಘನೆಯ ಆರೋಪದಲ್ಲಿ ಸಿಲುಕಿರುವ ವಿಜಯ್ ಮಲ್ಯ ಘೋಷಿತ ಅಪರಾಧಿ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯ ದೆಹಲಿ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಮುಖ್ಯ ಮ್ಯಾಜಿಸ್ಟ್ರೇಟ್ ದೀಪಕ್ ಶೆಹ್ರಾವತ್ ಅವರು ಈ ವಿಷಯವನ್ನು ಇಂದು ಸ್ವತಃ ತೆಗೆದುಕೊಳ್ಳುವ ಸಾಧ್ಯತೆಯಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್. ಕೆ. ಮಾತಾ, ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಣೆ ಮಾಡುವುದಲ್ಲದೆ ಬೇರೆ ಮಾರ್ಗವಿಲ್ಲ ಎಂದು ವಾದಿಸಿದರು. ಕಳೆದ ಏಪ್ರಿಲ್ 12 ರಂದು ನ್ಯಾಯಾಲಯವು ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು.
ವಿಜಯ್ ಮಲ್ಯ, ಭಾರತದಲ್ಲಿನ 17 ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ರೂ.ಗೆ ಹೆಚ್ಚಿನ ಸಾಲ ಪಡೆದಿದ್ದು ಇದೀಗ ಲಂದನ್ ನಲ್ಲಿ ತಲೆಮರೆಸಿಕೊಂಡಿದ್ದಾರೆ.

