ಹಿಮಾಚಲ ಪ್ರದೇಶ ಚುನಾವಣೆ: ಹಕ್ಕು ಚಲಾಯಿಸುವಂತೆ ಮತದಾರರಿಗೆ ಪಿಎಂ ಮನವಿ

ಹಿಮಾಚಲ ಪ್ರದೇಶ ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅರ್ಹ ಮತದಾರರೆಲ್ಲರು ತಮ್ಮ ....
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅರ್ಹ ಮತದಾರರೆಲ್ಲರು ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ದೇವರ ನಾಡು ಎನಿಸಿರುವ ಹಿಮಾಚಲ ಪ್ರದೇಶದಲ್ಲಿ ಇಂದು ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವ ದೇಶವಾದ ನಮ್ಮಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ. ದಾಖಲೆ ಸಂಖ್ಯೆಯಲ್ಲಿ ಇಂದು ಹಿಮಾಚಲ ಪ್ರದೇಶದಲ್ಲಿ ಮತದಾನವಾಗಬೇಕು ಎಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.
ಈಗಿನ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ವೀರಭದ್ರ ಸಿಂಗ್ ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಭಾರತೀಯ ಜನತಾ ಪಾರ್ಟಿಯ ಪ್ರೇಮ್ ಕುಮಾರ್ ದುಮಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಬಹುಜನ ಸಮಾಜ ಪಕ್ಷ 42 ಕ್ಷೇತ್ರಗಳಲ್ಲಿ, ಸಿಪಿಎಂ 14 ಸ್ಥಾನಗಳಿಗೆ, ಸ್ವಾಭಿಮಾನ ಪಕ್ಷ ಮತ್ತು ಲೋಕ ಘಟ್ ಬಂದನ್ ಪಕ್ಷ 6 ಸ್ಥಾನಗಳಲ್ಲಿ ಮತ್ತು ಸಿಪಿಐ 3 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ.
ಚುನಾವಣೆ ಪ್ರಚಾರದ ವೇಳೆ ಭ್ರಷ್ಟಾಚಾರದ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದು ಬಿಜೆಪಿಯ ಮುಖ್ಯ ಅಜೆಂಡವಾಗಿದ್ದರೆ, ಸರಕು ಮತ್ತು ಸೇವಾ ತೆರಿಗೆ ಹಾಗೂ ನೋಟುಗಳ ಅಮಾನ್ಯತೆ ಬಗ್ಗೆ ಬಿಜೆಪಿಯನ್ನು ಕಾಂಗ್ರೆಸ್ ಕಟ್ಟಿಹಾಕಲು ಪ್ರಯತ್ನಿಸಿತ್ತು.
ರಾಜ್ಯದಲ್ಲಿ ಒಟ್ಟು 50,25,941 ಮತದಾರರು ಇದ್ದು 7,525 ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿಪ್ಯಾಟ್ ಗಳ ಸಹಾಯದಿಂದ ಮತ ಚಲಾವಣೆ ನಡೆಯಲಿದೆ.
ಮತ ಎಣಿಕೆ ಡಿಸೆಂಬರ್ 18ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com