ನವದೆಹಲಿ: ಚಾಯ್ ವಾಲ ದೇಶದ ಪ್ರಧಾನಿಯಾಗಬಹುದಾದರೆ, ವಕೀಲ್ ಬಾಬು ಆರ್ಥಿಕತೆ ಬಗ್ಗೆ ಮಾತನಾಡಬಹುದಾದರೆ ನಾನೇಕೆ ಆರ್ಥಿಕತೆ ಬಗ್ಗೆ ಮಾತನಾಡಬಾರದು ಎಂದು ಹಿರಿಯ ನಟ ಹಾಗೂ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಪ್ರಶ್ನಿಸಿದ್ದಾರೆ. ಈ ಮೂಲಕ ಶತೃಘ್ನ ಸಿನ್ಹಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ಟೀಕಾ ಪ್ರಹಾರ ನಡೆಸಿದ್ದಾರೆ.
ತಮ್ಮದೇ ಪಕ್ಷದವರ ವಿರುದ್ಧ ವಾಗ್ದಾಳಿ ನಡೆಸುವುದರಿಂದ ಶತೃಘ್ನ ಸಿನ್ಹಾ ಹೆಚ್ಚು ಗುರುತಿಸಿಕೊಂಡಿದ್ದು, ಆರ್ಥಿಕ ತಜ್ಞರಲ್ಲದವರು ಆರ್ಥಿಕತೆ ಬಗ್ಗೆ ಮಾತನಾಡಬಹುದಾದರೆ ತಾವೂ ಸಹ ಆರ್ಥಿಕತೆ ಬಗ್ಗೆ ಮಾತನಾಡಬಹುದು ಎಂದು ಹೇಳಿದ್ದಾರೆ.
"ವಕೀಲ್ ಬಾಬು ಆರ್ಥಿಕತೆ ಬಗ್ಗೆ ಮಾತನಾಡಬಹುದಾದರೆ, ಟಿವಿ ನಟಿ, ದೇಶದ ಮಾನವ ಸಂಪನ್ಮೂಲ ಸಚಿವೆಯಾಗಬಹುದಾದರೆ, ಚಾಯ್ ವಾಲ ದೇಶದ.... ನಾನು ಹೆಚ್ಚು ಹೇಳುವುದಿಲ್ಲ... " ಎಂದಿರುವ ಶತೃಘ್ನ ಸಿನ್ಹಾ ನಾನೇಕೆ ದೇಶದ ಆರ್ಥಿಕತೆ ಬಗ್ಗೆ ಮಾತನಾಡಬಾರದು ಎಂದು ಪ್ರಶ್ನಿಸಿದ್ದಾರೆ.
ಆರ್ಥಿಕತೆ ಬಗ್ಗೆ ಮಾತನಾಡಲು ಸಿನಿಮಾ ಹಿನ್ನೆಲೆಯುಳ್ಳ ಶತೃಘ್ನ ಸಿನ್ಹಾ ಅವರಿಗೇನು ಅರ್ಹತೆ ಇದೆ ಎಂದು ಜನರು ಕೇಳಿದ್ದಾರೆ ಎಂದು ಬಿಜೆಪಿ ಸಂಸದ ಹೇಳಿದ್ದು, ಕಳೆದ ವರ್ಷ ನಡೆದ ನೋಟು ನಿಷೇಧದಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.