ಮುಂಬೈ ಕಾಲ್ತುಳಿತ: ಸಚಿನ್ ಕಳೆದ ವರ್ಷವೇ ಪಾದಚಾರಿ ಸೇತುವೆ ಅವ್ಯವಸ್ಥೆ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು

23 ಮಂದಿಯನ್ನು ಬಲಿ ಪಡೆದ ಮುಂಬೈನ ಎಲ್ಫಿನ್‍ಸ್ಟೋನ್ ರೈಲ್ವೆ ನಿಲ್ದಾಣದ ಪಾದಚಾರಿ ಮೇಲ್ಸೇತುವೆ ಅವ್ಯವಸ್ಥೆಗೆ ಕ್ರಿಕೆಟ್ ದಿಗ್ಗಜ ಹಾಗೂ....
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
ಮುಂಬೈ: 23 ಮಂದಿಯನ್ನು ಬಲಿ ಪಡೆದ ಮುಂಬೈನ ಎಲ್ಫಿನ್‍ಸ್ಟೋನ್ ರೈಲ್ವೆ ನಿಲ್ದಾಣದ ಪಾದಚಾರಿ ಮೇಲ್ಸೇತುವೆ ಅವ್ಯವಸ್ಥೆಗೆ ಕ್ರಿಕೆಟ್ ದಿಗ್ಗಜ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಕಳೆದ ವರ್ಷವೇ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು. ಆದರೂ ರೈಲ್ವೆ ಸಚಿವಾಲಯ ಆ ಬಗ್ಗೆ ಗಮನಹರಿಸದಿರುವುದೇ ದೊಡ್ಡ ದುರಂತಕ್ಕೆ ಕಾರಣವಾಗಿದೆ.
ಸಚಿನ್ ತೆಂಡೂಲ್ಕರ್ ಅವರು ಸಂಸತ್ ಕಲಾಪಕ್ಕೆ ಗೈರು ಆಗುತ್ತಾರೆ ಎಂಬ ಟೀಕೆಗೆ ಗುರಿಯಾಗಿದ್ದರು, ಹಾಜರಾದ ಕೆಲವೇ ದಿನಗಳಲ್ಲಿ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. 
ಎಲ್ಫಿನ್‍ಸ್ಟೋನ್ ಅವ್ಯವಸ್ಥೆ ಬಗ್ಗೆ ಸಚಿನ್ ತೆಂಡೂಲ್ಕರ್ ಮಾತ್ರವಲ್ಲ, ಶಿವಸೇನಾ ಸಂಸದ ಅರವಿಂದ ಸಾವಂತ್ ಕೂಡಾ ಎಲ್ಫಿನ್‍ಸ್ಟೋನ್ ರೋಡ್ ಸ್ಟೇಷನ್ ಪಾದಚಾರಿ ಸೇತುವೆಯನ್ನು ದುರಸ್ಥಿಗೊಳಿಸುವ ಬಗ್ಗೆ ಅಂದಿನ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಮಾಡಿದ್ದರು. ಈ ಮನವಿ ಸ್ವೀಕರಿಸಿದ ಪ್ರಭು 11.86 ಕೋಟಿ ರುಪಾಯಿ ವೆಚ್ಚದಲ್ಲಿ ಪ್ರಸ್ತುತ ಸಂಚಾರಿ ಸೇತುವೆಯ ಸುಧಾರಣೆಗೆ ಅನುಮತಿ ನೀಡಿದ್ದರು.
2016ರಲ್ಲಿ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಸಚಿನ್, ಸದಾ ಜನರಿಂದ ಗಿಜಿಗಿಡುವ ಎಲ್ಫಿನ್‍ಸ್ಟೋನ್ ರೋಡ್ ಸ್ಟೇಷನ್, ಮುಂಬ್ರಾ, ಪರೇಲ್ ಮತ್ತು ಇನ್ನಿತರ ರೈಲ್ವೆ ನಿಲ್ದಾಣಗಳಲ್ಲಿ ಕೇವಲ ಒಂದೇ ಒಂದು ಸಂಚಾರ ಸೇತುವೆ ಇದೆ ಎಂಬುದನ್ನು ರೈಲ್ವೆ ಸಚಿವಾಲಯ ಗಮನಿಸಿದೆಯೇ? ಜನದಟ್ಟಣೆ ಜಾಸ್ತಿ ಇರುವ ಈ ಸ್ಟೇಷನ್‍ಗಳಲ್ಲಿ ಜನರ ಸುರಕ್ಷೆಗಾಗಿ ಹೆಚ್ಚುವರಿ ಸೇತುವೆಯೊಂದನ್ನು ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ರಜೇನ್ ಗೊಹೈನ್, ಭಯಾಂದರ್, ಎಲ್ಫಿನ್‍ಸ್ಟೋನ್ ರೋಡ್, ಕಂಡೀವಲಿ, ಖಾರ್ ರೋಡ್ ಮತ್ತು ವಿರಾರ್ ರೈಲ್ವೆ ನಿಲ್ದಾಣದಲ್ಲಿ ಹೊಸತಾಗಿ 5 ಪಾದಚಾರಿ ಸಂಚಾರ ಸೇತುವೆ ನಿರ್ಮಿಸಲು ಪಶ್ಚಿಮ ರೈಲ್ವೆ ಅನುಮತಿ ನೀಡಿರುವುದಾದಗಿ ತಿಳಿಸಿದ್ದರು. ಮುಂಬ್ರಾ ಮತ್ತು ಪರೇಲ್ ರೈಲ್ವೆ ನಿಲ್ದಾಣದಲ್ಲಿನ ಸಂಚಾರ ಸೇತುವೆಯ ಕಾಮಗಾರಿ ಈಗಾಗಲೇ ಆರಂಭವಾಗಿದ್ದು ಮುಂಬ್ರಾದಲ್ಲಿ ಈ ಸೇತುವೆಯ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ವಾಗ್ದಾನ ನೀಡಿದ್ದರು.
ಕಳೆದ ಸೆಪ್ಟೆಂಬರ್ 29ರಂದು ಮುಂಬೈ ಎಲ್ಫಿನ್‍ಸ್ಟೋನ್ ರೋಡ್ ಸ್ಟೇಷನ್‍ನ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 23 ಮಂದಿ ಸಾವಿಗೀಡಾಗಿದ್ದಾರೆ. '2016- 17ರಲ್ಲಿ ಈ ಸಂಚಾರ ಸೇತುವೆಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದೇವೆ' ಎಂಬ ಸರ್ಕಾರ ಈ ಭರವಸೆ ಕೇವಲ ಕಾಗದದಲ್ಲಿಯೇ ಉಳಿದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com