ಅಲಹಬಾದ್: ಬಿಎಸ್ಪಿ ನಾಯಕನ ಗುಂಡಿಕ್ಕಿ ಹತ್ಯೆ, ಬೆಂಬಲಿಗರಿಂದ ಬಸ್ಸಿಗೆ ಬೆಂಕಿ

ಅಲಹಬಾದ್ ವಿಶ್ವವಿದ್ಯಾಲಯದ ಹಾಸ್ಟೇಲ್ ಹೊರಗಡೆ ಬಿಎಸ್ಪಿ ನಾಯಕ ರಾಜೇಶ್ ಯಾದವ್ ಅವರನ್ನು ಮಂಗಳವಾರ....
ಬೆಂಬಲಿಗರಿಂದ ಬಸ್ ಗೆ ಬೆಂಕಿ
ಬೆಂಬಲಿಗರಿಂದ ಬಸ್ ಗೆ ಬೆಂಕಿ
ಅಲಹಬಾದ್: ಅಲಹಬಾದ್ ವಿಶ್ವವಿದ್ಯಾಲಯದ ಹಾಸ್ಟೇಲ್ ಹೊರಗಡೆ ಬಿಎಸ್ಪಿ ನಾಯಕ ರಾಜೇಶ್ ಯಾದವ್ ಅವರನ್ನು ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಆಕ್ರೋಶಗೊಂಡ ಅವರ ಬೆಂಬಲಿಗರು ಬಸ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜೇಶ್ ಯಾದವ್ ಅವರು ತಮ್ಮ ಸ್ನೇಹಿತ ಮುಖುಲ್ ಸಿಂಗ್ ಅವರೊಂದಿಗೆ ಇಂದು ಬೆಳಗ್ಗೆ ಅಲಹಬಾದ್ ವಿಶ್ವವಿದ್ಯಾಲಯದ ತಾರಾಚಂದ್ ಹಾಸ್ಟೇಲ್ ಹೊರಗಡೆ ಯಾರೋ ಒಬ್ಬರನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಗುಂಡಿನ ದಾಳಿ ನಡೆದಿದೆ.
ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್ ಯಾದವ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಅವರು ತಿಳಿಸಿದ್ದಾರೆ. ಅಲ್ಲದೆ ಯಾದವ್ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
40 ವರ್ಷದ ಯಾದವ್ ಅವರು ಕಳೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗ್ಯಾನ್ಪುರ್ ವಿಧಾನಸಭಾ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಇನ್ನು ಯಾದವ್ ಹತ್ಯೆ ಖಂಡಿಸಿ ಅವರ ಬೆಂಬಲಿಗರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಜಾರ್ಜ್‌ಟೌನ್ ಬಳಿ ಎರಡು ಸರ್ಕಾರಿ ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಸುಮಾರು 50 ಜನ ಉದ್ರಿಕ್ತರ ಗುಂಪು ರಾಜೇಶ್ ಯಾದವ್ ಅವರನ್ನು ದಾಖಲಿಸಿದ್ದ ಆಸ್ಪತ್ರೆ ಮೇಲೂ ದಾಳಿ ನಡೆಸಿ ಹಾನಿ ಉಂಟು ಮಾಡಿದ್ದಾರೆ. ಪತ್ರಕರ್ತರ ಮೇಲೂ ಹಲ್ಲೆ ನಡೆಸಲಾಗಿದೆ. ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಶ್ರಮಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com