ಪಂಚಕುಲ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದತ್ತು ಪುತ್ರಿ ಎನ್ನಲಾಗುತ್ತಿರುವ ಹನಿಪ್ರೀತ್ ಇನ್ಸಾನ್ ಶರಣಾಗುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಪಂಚಕುಲ ಜಿಲ್ಲಾ ಕೋರ್ಟ್ ಗೆ ಬಳಿ ಮತ್ತು ಪಂಚಕುಲ ಪೊಲೀಸ್ ಆಯುಕ್ತರ ಕಚೇರಿ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಂ ಸಿಂಗ್ ದೋಷಿ ಎಂದು ಘೋಷಿಸಿದ ಬಳಿಕ ಪಂಚಕುಲದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಪ್ರೀತ್ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳೆದ ಒಂದು ತಿಂಗಳಿಂದ ತಲೆ ಮರೆಸಿಕೊಂಡಿದ್ದಾರೆ.
ನಿನ್ನೆ ದಿಢೀರ್ ರಾಷ್ಟ್ರೀಯ ಮಾಧ್ಯಮವೊಂದರ ಮುಂದೆ ಕಾಣಿಸಿಕೊಂಡ ಹನಿಪ್ರೀತ್, ತಾವು ಮುಂದೆ ಏನು ಮಾಡಬೇಕು ಎಂಬುದರ ಕುರಿತು ಕಾನೂನು ಸಲಹೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ಈ ಮಧ್ಯೆ, ಹನಿಪ್ರೀತ್ ಪಂಚಕುಲ ಜಿಲ್ಲಾ ಕೋರ್ಟ್ ಮುಂದೆ ಶರಣಾಗಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಜಿಲ್ಲಾ ಕೋರ್ಟ್ ಆವರಣದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಜಿಲ್ಲಾ ಕೋರ್ಟ್ ಮತ್ತು ಪೊಲೀಸ್ ಆಯುಕ್ತರ ಕಚೇರಿಯನ್ನು ಸಂಪರ್ಕಿಸುವ ಪಂಚಕುಲದ ಎಲ್ಲಾ ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.