ಎಸ್ಐಟಿಯಿಂದ ಹನಿಪ್ರೀತ್ ತೀವ್ರ ವಿಚಾರಣೆ, ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್....
ಹನಿಪ್ರೀತ್
ಹನಿಪ್ರೀತ್

ಪಂಚಕುಲ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಆಪ್ತೆ ಹಾಗೂ ದತ್ತು ಪುತ್ರಿ ಎನ್ನಲಾಗುತ್ತಿರುವ ಹನಿಪ್ರೀತ್ ಇನ್ಸಾನ್ ಹರಿಯಾಣ ಪೊಲೀಸರ ವಿಶೇಷ ತನಿಖಾ ತಂಡ(ಎಸ್ಐಟಿ) ಗುರುವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.

ರಾಜ್ಯ ದ್ರೋಹ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹನಿಪ್ರೀತ್ ಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಆರು ದಿನಗಳ ಕಾಲ ತನ್ನ ವಶಕ್ಕೆ ಪಡೆದಿರುವ ಎಸ್ ಐಟಿ ಅಧಿಕಾರಿಗಳು, ಬಾಬಾ ದತ್ತು ಪುತ್ರಿಯನ್ನು ಇಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಹನಿಪ್ರೀತ್ ಳನ್ನು ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಮ್ ರಹೀಂ ಸಿಂಗ್ ವಿವಾದಾತ್ಮಕ ದತ್ತು ಪುತ್ರಿ ವಿಚಾರಣೆ ವೇಳೆ ಯಾವುದೇ ಬಿಟ್ಟುಕೊಡುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

ಎಸ್ಐಟಿ ಅಧಿಕಾರಿಗಳ ವಿಚಾರಣೆಗೆ ಹನಿಪ್ರೀತ್ ಸಹಕರಿಸುತ್ತಿಲ್ಲ. ಒಂದು ವೇಳೆ ಇದೇ ರೀತಿ ಮುಂದುವರಿದರೆ, ಆರೋಪಿಯನ್ನು ಮತ್ತೆ ಪೊಲೀಸ್ ವಶಕ್ಕೆ ಪಡೆಯಬೇಕಾಗುತ್ತದೆ ಎಂದು ಪಂಚಕುಲ ಪೊಲೀಸ್ ಆಯುಕ್ತ ಎ ಎಸ್ ಚಾವ್ಲಾ ಅವರು ಎಎನ್ಐಗೆ ತಿಳಿಸಿದ್ದಾರೆ.

 ಅತ್ಯಾಚಾರಿ ಬಾಬಾ ಜೈಲು ಪಾಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಹನಿಪ್ರೀತ್ ಳನ್ನು ಸುಮಾರು ಒಂದು ತಿಂಗಳ ನಂತರ ಮಂಗಳವಾರ ಪಂಜಾಬ್ ನ ಜಿರ್ಕಾಪುರ್ -ಪಟಿಯಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯಾಣ ಪೊಲೀಸರು ಬಂಧಿಸಿದ್ದರು. ನಿನ್ನೆ ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಹನಿಪ್ರೀತ್ ಳನ್ನು 6 ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

41 ಮಂದಿಯನ್ನು ಬಲಿ ಪಡೆದ ಪಂಚಕುಲ ಹಿಂಸಾಚಾರ ಪ್ರಕರಣದಲ್ಲಿ ಹನಿಪ್ರೀತ್ ಪಾತ್ರವಿದೆ ಮತ್ತು ಡೇರಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಆಕೆಯ ಬಳಿ ಸಾಕಷ್ಟು ಮಾಹಿತಿ ಸಂಗ್ರಹಿಸಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com