ಮುಂಬೈ: ಜಿಎಸ್ ಟಿ ದರ ಕಡಿತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಜಿಎಸ್ ಟಿ ಕೌನ್ಸಿಲ್ ಮಾಡಿದ ಬದಲಾವಣೆ ದೀಪಾವಳಿ ಕೊಡುಗೆಯಾಗುವುದಿಲ್ಲ. ಇನ್ನು ಸಾಕಷ್ಟು ಬದಲಾವಣೆ ಮಾಡುವ ಅಗತ್ಯ ಇದೆ ಎಂದಿದ್ದಾರೆ.
ಜಿಎಸ್ ಟಿ ದರ ಇಳಿಸಲು ಜಿಎಸ್‌ಟಿ ಕೌನ್ಸಿಲ್ ಸಭೆ ನಿರ್ಧಾರ ತೆಗೆದುಕೊಂಡಿರುವುದರಿಂದ ಈ ಬಾರಿ ದೀಪಾವಳಿ ಸಂಭ್ರಮ ಹಬ್ಬಕ್ಕೆ ಮುಂಚಿತವಾಗಿಯೇ ಬಂದಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಠಾಕ್ರೆ, ಇದು ದೀಪಾವಳಿ ಕೊಡುಗೆ ಅಲ್ಲ. ಇಷ್ಟು ಸಾಕಾಗುವುದಿಲ್ಲ ಎಂದಿದ್ದಾರೆ.
ಜಿಎಸ್ ಟಿ ತೆರಿಗೆ ದರ ಕಡಿತಗೊಳಿಸಿದ್ದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಆದರೆ ಜಿಎಸ್ ಟಿ ಅಡಿ ಇದುವರೆಗೆ ಹೆಚ್ಚು ತೆರಿಗೆ ಸಂಗ್ರಹಿಸಿದ್ದನ್ನು ವಾಪಸ್ ಕೊಡುತ್ತಾರೆಯೇ? ಎಂದು ಶಿವಸೇನಾ ಮುಖ್ಯಸ್ಥ ಪ್ರಶ್ನಿಸಿದ್ದಾರೆ.
ಇದೇ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇನ್ನು ದುಬಾರಿಯಾಗಿದ್ದು, ಈ ಬಗ್ಗೆ ಜನತೆಗೆ ತೀವ್ರ ಬೇಸರ ಇದೆ ಮತ್ತು ಹಣದುಬ್ಬರವೂ ಹೆಚ್ಚಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.