ನವದೆಹಲಿ: ಮುಸ್ಲಿಂ ಮಹಿಳೆಯರು ತಲೆಗೂದಲು ಕತ್ತರಿಸಬಾರದು, ಹುಬ್ಬನ್ನು ಆಕಾರಗೊಳಿಸುವುದು, ತೆಗೆಯುವುದು ಇತ್ಯಾದಿಗಳನ್ನು ಮಾಡಬಾರದು ನಿಷೇಧಿಸಿ ಉತ್ತರ ಪ್ರದೇಶದ ಇಸ್ಲಾಮಿಕ್ ಉನ್ನತ ಶಿಕ್ಷಣ ಸಂಸ್ಥೆ ದರುಲ್ ಉಲೂಮ್ ದಿಯೋಬಂದ್ ನಿನ್ನೆ ಹೊಸ ಫತ್ವಾ ಹೊರಡಿಸಿದೆ.
ದರುಲ್ ಉಲೂಮ್ ದಿಯೊಬಂದ್ ನ ಶಾಸನಗಳನ್ನು ಪ್ರಕಟಿಸುವ ದರುಲ್ ಇಫ್ತಾ ಈ ಕ್ರಮವನ್ನು ಇಸ್ಲಾಮಿಕ್ ವಿರೋಧಿ ಎಂದು ವ್ಯಾಖ್ಯಾನಿಸಿದೆ.
ಹುಬ್ಬುಗಳನ್ನು ಆಕಾರಗೊಳಿಸುವುದು, ತಲೆಗೂದಲು ಕತ್ತರಿಸುವುದರ ಬಗ್ಗೆ ಇಸ್ಲಾಂ ಕಾನೂನು ಏನು ಹೇಳುತ್ತದೆ ಎಂದು ಕೋರಿ ಸಹರಾನ್ಪುರದ ಮುಸಲ್ಮಾನರೊಬ್ಬರು ದರುಲ್ ಇಫ್ತಾರನ್ನು ಸಂಪರ್ಕಿಸಿದ್ದರು. ಅದಕ್ಕೆ ಈ ಶಿಕ್ಷಣ ಸಂಸ್ಥೆ ಈ ಮೇಲಿನಂತೆ ಫತ್ವಾ ಹೊರಡಿಸಿದೆ.
ನನ್ನ ಪತ್ನಿಗೆ ತಲೆಗೂದಲು ಕತ್ತರಿಸಲು ಮತ್ತು ಹುಬ್ಬನ್ನು ತೆಗೆಯಲು ಅವಕಾಶವಿದೆಯೇ ಎಂದು ದರುಲ್ ಇಫ್ತಾ ಬಳಿ ಮುಸ್ಲಿಂ ವ್ಯಕ್ತಿ ಕೇಳಿದ್ದರು.
ಮುಸ್ಲಿಂ ಮಹಿಳೆ ಇಂತಹ ಕಾರ್ಯದಲ್ಲಿ ಭಾಗಿಯಾಗಿದ್ದಾಳೆಂದರೆ ಆಕೆ ಮುಸ್ಲಿಂ ಕಾನೂನನ್ನು ಉಲ್ಲಂಘಿಸುತ್ತಿದ್ದಾಳೆ ಎಂದರ್ಥ ಎಂದು ಫತ್ವಾದಲ್ಲಿ ಹೇಳಲಾಗಿದೆ.
ಇಸ್ಲಾಂ ಧರ್ಮದಲ್ಲಿ ತಲೆಗೂದಲು ಕತ್ತರಿಸುವುದು, ಹುಬ್ಬು ಕತ್ತರಿಸುವುದು ಇತ್ಯಾದಿ ಸೇರಿದಂತೆ ಹತ್ತು ಕೆಲಸಗಳನ್ನು ನಿಷೇಧಿಸಲಾಗಿದೆ ಎಂದು ದರುಲ್ ಇಫ್ತಾ ತಿಳಿಸಿದೆ.