ವಾಡ್ನಗರ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ವಾಡ್ನಗರ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಮಾಜಿ ಪ್ರಧಾನಿ ಅಟಲ್ ಜಿಯವರ ಆರೋಗ್ಯ ನೀತಿ ಯುಪಿಎ ಸರ್ಕಾರದಿಂದ ಸ್ಥಗಿತ: ಪ್ರಧಾನಿ ಮೋದಿ

ಹಿಂದಿನ ಯುಪಿಎ ಸರ್ಕಾರ 10 ವರ್ಷಗಳ ಕಾಲ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮೊದಲ ಬಾರಿಗೆ ಭಾರತದಲ್ಲಿ ಜಾರಿಗೆ ತಂದ ಆರೋಗ್ಯ ...
ಅಹಮದಾಬಾದ್: ಹಿಂದಿನ ಯುಪಿಎ ಸರ್ಕಾರ 10 ವರ್ಷಗಳ ಕಾಲ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮೊದಲ ಬಾರಿಗೆ ಭಾರತದಲ್ಲಿ ಜಾರಿಗೆ ತಂದ ಆರೋಗ್ಯ ನೀತಿಗೆ ಸಂಬಂಧಪಟ್ಟ ಯಾವ ಕೆಲಸವನ್ನೂ ಮಾಡಲಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸೇವೆ ಯೋಜನೆಗಳು ಕುಂಠಿತವಾಗಿದ್ದವು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಎರಡು ದಿನಗಳ ಗುಜರಾತ್ ಪ್ರವಾಸದ ವೇಳೆ ತಮ್ಮ ಹುಟ್ಟೂರಾದ ವಾಡ್ನಗರ್ ಗೆ ಭೇಟಿ ನೀಡಿದ ಪ್ರಧಾನಿ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಿ ತಾವು ಓದಿದ ಶಾಲೆಗೆ ಭೇಟಿ ನೀಡಿದರು.
10 ವರ್ಷಗಳ ಯುಪಿಎ ಸರ್ಕಾರದ ಆಳ್ವಿಕೆ ಅವಧಿಯಲ್ಲಿ ಆರೋಗ್ಯ ಸೇವೆಗೆ ಸಂಬಂಧಪಟ್ಟ ಯಾವುದೇ ಕೆಲಸವಾಗಿರಲಿಲ್ಲ. ಮಾಜಿ ಪ್ರಧಾನಿ ವಾಜಪೇಯಿಯವರು ಮೊದಲ ಬಾರಿಗೆ ಆರೋಗ್ಯ ನೀತಿಯನ್ನು ತಂದರು. ಆದರೆ ಅದಕ್ಕೆ ಸಂಬಂಧಪಟ್ಟಂತೆ ಯುಪಿಎ ಸರ್ಕಾರ ಯಾವುದೇ ಕೆಲಸ ಮಾಡಿರಲಿಲ್ಲ ಎಂದರು.
ಇದೇ ಸಂದರ್ಭದಲ್ಲಿ ವೈದ್ಯರುಗಳು ಮುಂದೆ ಬಂದು ಆರೋಗ್ಯ ವಲಯದಲ್ಲಿ ಸೇವೆಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಕೇವಲ ವೈದ್ಯರಿಂದ ಮಾತ್ರ ಆರೋಗ್ಯ ನೀಡಲು ಸಾಧ್ಯವಿಲ್ಲ, ಉತ್ತಮ ಹವ್ಯಾಸ, ಸ್ವಚ್ಛತೆ ಕೂಡ ಅಗತ್ಯ. ಈ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ ಮುಖ್ಯವಾಗಿದ್ದು ದೇಶವಾಸಿಗಳು ಇದರಲ್ಲಿ ಭಾಗಿಯಾಗಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನೆರೆದಿದ್ದ ಜನಸಮೂಹಕ್ಕೆ ಮನವಿ ಮಾಡಿಕೊಂಡರು.
ಇದಕ್ಕೂ ಮುನ್ನ ಪ್ರಧಾನಿಯವರು ತಮ್ಮ ಹುಟ್ಟೂರಾದ ಮೆಹ್ಸಾನ ಜಿಲ್ಲೆಯ ವಾಡ್ನಗರದಲ್ಲಿ ರೋಡ್ ಶೋ ನಡೆಸಿದರು. ಪ್ರಧಾನಿಯವರನ್ನು ಸ್ವಾಗತಿಸಲು ರಸ್ತೆಯುದ್ದಕ್ಕೂ ಕಿಕ್ಕಿರಿದು ಜನರು ಸೇರಿದ್ದರು. ಪ್ರಧಾನಿಯಾದ ಬಳಿಕ ತಮ್ಮ ಹುಟ್ಟೂರಿಗೆ ಮೋದಿಯವರು ಭೇಟಿ ಕೊಟ್ಟಿರುವುದು ಇದೇ ಮೊದಲ ಬಾರಿ.
ಜನರ ಕೇಕೆ, ಹಾರೈಕೆ ಖುಷಿಯನ್ನು ಕಂಡ ಮೋದಿಯವರು ಹೆಲಿಪ್ಯಾಡ್ ನಿಂದ ಇಳಿದ ನಂತರ ತಾವು ಸಂಚರಿಸುತ್ತಿದ್ದ ಎಸ್ ಯುವಿ ಕಾರಿನ ಮೆಟ್ಟಿಲು ಹತ್ತಿ ಜನರತ್ತ ಕೈ ಬೀಸಿದರು. ಇಡೀ ನಗರವನ್ನು ಅಲಂಕರಿಸಲಾಗಿತ್ತು. 

Related Stories

No stories found.

Advertisement

X
Kannada Prabha
www.kannadaprabha.com