ಮೆಟ್ರೋ ದರ ಏರಿಕೆ ಹಿಂತೆಗೆದುಕೊಳ್ಳಲು ದೆಹಲಿ ಸರ್ಕಾರ ರೂ. 3 ಸಾವಿರ ಕೋಟಿ ಕೊಡಲಿ: ಬಿಜೆಪಿ

ಮೆಟ್ರೊ ದರ ಏರಿಕೆ ಪ್ರಸ್ತಾಪವನ್ನು ಹಿಂತೆಗೆದುಕೊಂಡರೆ ದೆಹಲಿ ಸರ್ಕಾರವೇ 3,000 ಕೋಟಿ ರೂಪಾಯಿ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮೆಟ್ರೊ ದರ ಏರಿಕೆ ಪ್ರಸ್ತಾಪವನ್ನು ಹಿಂತೆಗೆದುಕೊಂಡರೆ ದೆಹಲಿ ಸರ್ಕಾರವೇ 3,000 ಕೋಟಿ ರೂಪಾಯಿ ಭರಿಸಬೇಕೆಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ. ಮೆಟ್ರೊ ದರ ಏರಿಕೆ ವಿರುದ್ಧ ಸದನದಲ್ಲಿ ನಿರ್ಣಯ ಹೊರಡಿಸುವುದಕ್ಕೆ ಕೂಡ ಬಿಜೆಪಿ ನಿರಾಕರಿಸಿದೆ. 
ದೆಹಲಿ ಸರ್ಕಾರದ ಸಾರಿಗೆ ಸಚಿವ ಕೈಲಾಶ್ ಗೆಹ್ಲೊಟ್ ಮಂಡಿಸಿದ ಉದ್ದೇಶಿತ ಮೆಟ್ರೊ ದರ ಏರಿಕೆಯ ನಿರ್ಣಯವನ್ನು ಸದನ ಸದಸ್ಯರು ಧ್ವನಿ ಮತದ ಮೂಲಕ ಅನುಮೋದಿಸಿದರು. ಮೆಟ್ರೊ ರೈಲಿನ ಸಂಪೂರ್ಣ ನಿರ್ವಹಣೆ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಬೇಕೆಂದು ನಿಯಮ ನಿಬಂಧಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ತಿಳಿಸಿದ್ದಾರೆ. ಮೆಟ್ರೊ ರೈಲಿನ ದರ ಏರಿಕೆಯನ್ನು ನಿಲ್ಲಿಸಬೇಕೆಂದರೆ ದೆಹಲಿ ಸರ್ಕಾರ 3,000 ಕೋಟಿ ರೂಪಾಯಿ ವಾರ್ಷಿಕ ಅನುದಾನ ನೀಡಬೇಕೆಂದು ಹೇಳಿದ್ದಾರೆ.
ದೆಹಲಿ ಮೆಟ್ರೊ ರೈಲು ನಿಗಮದಲ್ಲಿ ಕೇಂದ್ರ ಹಾಗೂ ದೆಹಲಿ ರಾಜ್ಯ ಸರ್ಕಾರಗಳು ಸಮಾನ ಪಾಲುದಾರರು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಎರಡೂ ಸರ್ಕಾರಗಳು ಸಮಾನವಾಗಿ ಕಾರ್ಯಚರಣೆ ನಷ್ಟವನ್ನು ಭರ್ತಿ ಮಾಡುವುದು ಮುಖ್ಯಮಂತ್ರಿಯವರ ಈ ನಡೆಯ ಹಿಂದಿನ ಉದ್ದೇಶವಾಗಿದೆ ಎಂದು ಆರೋಪಿಸಿದರು. 
ಮೆಟ್ರೊ ದರ ಏರಿಕೆಯನ್ನು ಹಿಂತೆಗೆದುಕೊಂಡರೆ 3,000 ಕೋಟಿ ರೂಪಾಯಿ ಕಾರ್ಯಚರಣೆ ವೆಚ್ಚ ಭರಿಸುವ ನಿಯಮ ನಾಳೆಯಿಂದಲೇ ಜಾರಿಗೆ ಬರಲಿದೆ. ದೆಹಲಿ ಮೆಟ್ರೊ ಸುಗಮವಾಗಿ ಕಾರ್ಯನಿರ್ವಹಿಸಲು ದೆಹಲಿ ಸರ್ಕಾರ ಅಡ್ಡಿಯನ್ನುಂಟುಮಾಡುತ್ತಿದೆ. 2016ರ ಅಂತ್ಯದ ವೇಳೆಗೆ ದೆಹಲಿ ಮೆಟ್ರೊದ ಮೂರನೇ ಹಂತದ ಕಾಮಗಾರಿ ಮುಗಿಯಬೇಕಾಗಿತ್ತು. ಆದರೆ ದೆಹಲಿ ಸರ್ಕಾರದ ನಿಷ್ಕ್ರಿಯತೆಯಿಂದ 15 ತಿಂಗಳುಗಳ ಕಾಲ ಕೆಲಸ ವಿಳಂಬವಾಯಿತು ಎಂದು ಗುಪ್ತ ಆರೋಪಿಸಿದರು.
ಅಲ್ಲದೆ ದೆಹಲಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ನ್ನು ಶೇಕಡಾ 5ರಷ್ಟು ತಗ್ಗಿಸಬೇಕು ಎಂದು ಒತ್ತಾಯಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com