ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ವಿಧಾನ ಪರಿಷತ್ ಸದಸ್ಯ ಮಹಿಳೆ ಮೇಲೆ ಹಲ್ಲೆ ನಡೆಸಿ ಪಾದರಕ್ಷೆಯಿಂದ ಹೊಡೆದ ಘಟನೆ ಮೊಬೈಲ್ ಕ್ಯಾಮರಾದಲ್ಲಿ ದಾಖಲಾಗಿದ್ದು ಆ ವಿಡಿಯೋವೀಗ ವೈರಲ್ ಆಗಿದೆ.
ಟಿಆರ್ ಎಸ್ ನ ವಿಧಾನ ಪರಿಷತ್ ಸದಸ್ಯ ಫಾರೂಖ್ ಹುಸೇನ್ ಅನಿವಾಸಿ ಭಾರತೀಯ ಮಹಿಳೆ ಮೇಲೆ ಕೆಟ್ಟ ಶಬ್ದಗಳಿಂದ ನಿಂದಿಸಿ ಆಕೆಗೆ ಬೆದರಿಕೆ ಹಾಕಿದ್ದರು ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಇಡೀ ಘಟನೆಯನ್ನು ಮಹಿಳೆಯ ಸಂಬಂಧಿಕರೊಬ್ಬರು ಮೊಬೈಲ್ ಫೋನ್ ನಲ್ಲಿ ದಾಖಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದರು.
ಹಲ್ಲೆಗೀಡಾದ ಮಹಿಳೆ ಅಮ್ಟು ವಸೇ ಪೊಲೀಸರಿಗೆ ದೂರು ನೀಡಿದ್ದು, ವಿಧಾನ ಪರಿಷತ್ ಸದಸ್ಯ ಫಾರೂಕ್ ಹುಸೇನ್ ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ ತಮ್ಮ ಪಾದರಕ್ಷೆಯಿಂದ ನನಗೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಹೈದರಾಬಾದಿನ ನಂಪಲ್ಲಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಅಮೆರಿಕಾದಿಂದ ಹಿಂತಿರುಗಿದ್ದ ಮಹಿಳೆ ಹೈದರಾಬಾದಿನ ಲಕ್ಡಿ ಕಾ ಪುಲ್ ಪ್ರದೇಶದಲ್ಲಿ ತಮ್ಮ ಫ್ಲಾಟ್ ನಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಹುಸೇನ್ ರಿಗೆ ಮನೆ ತೆರವುಗೊಳಿಸುವಂತೆ ಹೇಳಿದ್ದರು. ಅದಕ್ಕೆ ನಿರಾಕರಿಸಿದಾಗ ಮುಖ್ಯಮಂತ್ರಿಗೆ ದೂರು ನೀಡುವುದಾಗಿ ಮಹಿಳೆ ಹೇಳಿದ್ದಾರೆ.
ಇದರಿಂದ ಕುಪಿತರಾದ ಹುಸೇನ್ ಮಹಿಳೆಯನ್ನು ನಿಂದಿಸಿದ್ದು ಮಾತ್ರವಲ್ಲದೆ ತಮ್ಮ ಕಾಲಿನಿಂದ ಪಾದರಕ್ಷೆ ತೆಗೆದು ಹೊಡೆಯಲು ಬಂದರು ಎನ್ನಲಾಗಿದೆ.
ಹುಸೇನ್ ಕಳೆದ ಆರು ವರ್ಷಗಳಿಂದ ಫ್ಲಾಟ್ ನಲ್ಲಿ ವಾಸಿಸುತ್ತಿದ್ದು ಕಳೆದ ಕೆಲ ತಿಂಗಳುಗಳಿಂದ ಬಾಡಿಗೆ ನೀಡಿರಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.