ಸಾಂದರ್ಭಿಕ ಚಿತ್ರ
ದೇಶ
ಪಟಾಕಿ ಮಾರಾಟ ನಿಷೇಧಕ್ಕೆ ಕೋಮುವಾದದ ಬಣ್ಣ ಹಚ್ಚಬೇಡಿ: ಸುಪ್ರೀಂ ಕೋರ್ಟ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ದೀಪಾವಳಿಗೆ ಪಟಾಕಿ ಮಾರಾಟ ನಿಷೇಧಿಸಿ ನೀಡಲಾಗಿದ್ದ ತೀರ್ಪನ್ನು....
ನವದೆಹಲಿ: ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ ಆದೇಶವನ್ನು ಹಿಂತೆಗೆದುಕೊಳ್ಳಲು ಮತ್ತು ಬದಲಾವಣೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾಯಾಲಯದ ಆದೇಶಕ್ಕೆ ಕೋಮುವಾದದ ಅಂಶಗಳನ್ನು ತಂದು ರಾಜಕೀಯಗೊಳಿಸಬೇಡಿ ಎಂದು ಹೇಳಿದೆ.
ಆದೇಶದ ಕುರಿತು ಕೋಮುವಾದ ಪ್ರತಿಕ್ರಿಯೆಗಳಿಂದ ನಮಗೆ ಬೇಸರವಾಗಿದೆ. ಇದನ್ನು ರಾಜಕೀಯಗೊಳಿಸಿ ಪಟಾಕಿ ನಿಷೇಧಕ್ಕೆ ಕೋಮುವಾದದ ದೃಷ್ಟಿಕೋನವನ್ನು ನೀಡಬೇಡಿ. ನನ್ನನ್ನು ಬಲ್ಲವರಿಗೆ ನಾನು ಇಂತಹ ವಿಷಯದಲ್ಲಿ ಧರ್ಮವನ್ನು ಪಾಲಿಸುವ ವ್ಯಕ್ತಿ ಎಂಬುದು ಗೊತ್ತಿದೆ.ಇಲ್ಲಿ ನಾವು ಯಾವುದೇ ರೀತಿಯ ಚರ್ಚೆ ನಡೆಸುತ್ತಿಲ್ಲ. ನಮ್ಮ ನಿಷೇಧ ಆದೇಶಕ್ಕೆ ಯಾವುದೇ ಧಾರ್ಮಿಕ ಅಂಶಗಳು ಪ್ರಭಾವ ಬೀರಿಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹೇಳಿದರು. ಅವರು ಮತ್ತಿಬ್ಬರು ನ್ಯಾಯಾಧೀಶರೊಂದಿಗೆ ಇದೇ 9ರಂದು ದೆಹಲಿಯಲ್ಲಿ ಈ ವರ್ಷ ಪಟಾಕಿ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದರು.
ದೆಹಲಿ ರಾಜಧಾನಿ ಪ್ರದೇಶದಲ್ಲಿ ಈ ದೀಪಾವಳಿ ಸಮಯದಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಿದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಇದೇ ಸಂದರ್ಭದಲ್ಲಿ ಅವರು ಪೊಲೀಸರಿಗೆ ಸೂಚಿಸಿದರು.
ಜನರು ದೀಪಾವಳಿ ಆಚರಿಸುವುದನ್ನು ನ್ಯಾಯಾಲಯ ನಿಲ್ಲಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಿಕ್ರಿ ಮತ್ತು ಅಶೋಕ್ ಭೂಷಣ್ ತಿಳಿಸಿದರು.
ದೀಪಾವಳಿಯೆಂಬುದು ಕೇವಲ ಹಿಂದೂ ಧರ್ಮದವರು ಮಾತ್ರವಲ್ಲದೆ ಜೈನರು, ಸಿಖರು ಕೂಡ ಆಚರಿಸುತ್ತಾರೆ ಎಂದು ಹೇಳಿದರು.
ತಾತ್ಕಾಲಿಕ ಅನುಮತಿ ಹೊಂದಿರುವ ವ್ಯಾಪಾರಿಗಳು ನಿನ್ನೆ ಸುಪ್ರೀಂ ಕೋರ್ಟ್ ಮೊರೆ ಹೋಗಿ ದೆಹಲಿಯಲ್ಲಿ ಪಟಾಕಿಗಳ ಮಾರಾಟಕ್ಕೆ ನಿಷೇಧ ಹೇರಿರುವುದನ್ನು ಹಿಂತೆಗೆದುಕೊಳ್ಳುವಂತೆ ಕೋರಿದ್ದರು.
ದೆಹಲಿಯಲ್ಲಿ ಪಟಾಕಿಗಳ ಮಾರಾಟ ಮತ್ತು ಸಂಗ್ರಹಣೆ ನಿಷೇಧ ನವೆಂಬರ್ ಒಂದರವರೆಗೆ ಜಾರಿಯಲ್ಲಿರುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ