ಆರುಷಿ ಕೊಲೆ ಪ್ರಕರಣ: ತಲ್ವಾರ್ ದಂಪತಿ ಸೋಮವಾರ ಜೈಲಿನಿಂದ ಬಿಡುಗಡೆ ಸಾಧ್ಯತೆ

ತಮ್ಮ ಪುತ್ರಿ ಆರುಷಿ ಹಾಗೂ ಮನೆ ಕೆಲಸದ ಸಹಾಯಕ ಹೇಮರಾಜ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ....
ತಲ್ವಾರ್ ದಂಪತಿ
ತಲ್ವಾರ್ ದಂಪತಿ
ಲಖನೌ: ತಮ್ಮ ಪುತ್ರಿ ಆರುಷಿ ಹಾಗೂ ಮನೆ ಕೆಲಸದ ಸಹಾಯಕ ಹೇಮರಾಜ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಈಗ ಖುಲಾಸೆಗೊಂಡಿರುವ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅವರು ಸೋಮವಾರ ದಾಸ್ನಾ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ನಮಗೆ ಇದುವರೆಗೂ ಅಲಹಾಬಾದ್ ಹೈಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ. ಹೀಗಾಗಿ ರಾಜೇಶ್ ಮತ್ತು ನೂಪುರ್ ಅವರನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ. ನಾಳೆ ಎರಡನೇ ಶನಿವಾರ ಹಾಗೂ ನಾಡಿದ್ದು ಭಾನುವಾರವಾಗಿರುವುದರಿಂದ ಸೋಮವಾರವೇ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ತಲ್ವಾರ್ ಪರ ವಕೀಲ ತನ್ವೀರ್ ಮಿರ್ ಅಹಮ್ಮದ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಜೋಡಿ ಕೊಲಿ ಪ್ರಕರಣದಲ್ಲಿ ತಲ್ವಾರ್ ದಂಪತಿ ತಪ್ಪಿತಸ್ಥರು ಎಂದು ಸಿಬಿಐ ಕೋರ್ಟ್ ನವೆಂಬರ್ 2013ರಲ್ಲಿ ತೀರ್ಪು ನೀಡಿದ ನಂತರ ಆರೋಪಿಗಳು ಅಂದಿನಿಂದ ದಾಸ್ನಾ ಜೈಲಿನಲ್ಲಿದ್ದಾರೆ. 
ನಿನ್ನೆಯಷ್ಟೇ ಅಲಹಾಬಾದ್ ಹೈಕೋರ್ಟ್ ತಲ್ವಾರ್ ದಂಪತಿಯನ್ನು ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗಬೇಕಿತ್ತು.  
ಆರುಷಿ ಹಾಗೂ ಮನೆ ಕೆಲಸದಾತ ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಕೋರ್ಟ್ ರಾಜೇಶ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅಲಹಬಾದ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಅಲ್ಲದೆ ರಾಜೇಶ್‌ ಮತ್ತು ನೂಪುರ್‌ ಅವರೇ ಈ ಜೋಡಿ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ರಾಜೇಶ್‌ ಮತ್ತು ನೂಪುರ್‌ ದಂಪತಿ ತಮ್ಮ ಮಗಳು ಮತ್ತು ಮನೆ ಕೆಲಸದ ಸಹಾಯಕ ಹೇಮರಾಜ್‌ ಕೊಲೆಯ ಹೊಣೆಗಾರರಲ್ಲ ಎಂದು ನ್ಯಾಯಪೀಠ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com