ಬಾಳಾ ಠಾಕ್ರೆ ಭೇಟಿಯಾಗಿ ಸೋನಿಯಾ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಣಬ್ ಮುಖರ್ಜಿ!

2012ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಮುನ್ನ ಶಿವಸೇನೆಯ ಮುಖ್ಯಸ್ಥ ದಿವಂಗತ ಬಾಳಾ ಠಾಕ್ರೆಯವರನ್ನು ...
2012ರಲ್ಲಿ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಾಳಾ ಠಾಕ್ರೆಯವರೊಂದಿಗೆ ಪ್ರಣಬ್ ಮುಖರ್ಜಿ (ಪಿಟಿಐ ಸಂಗ್ರಹ ಚಿತ್ರ)
2012ರಲ್ಲಿ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಾಳಾ ಠಾಕ್ರೆಯವರೊಂದಿಗೆ ಪ್ರಣಬ್ ಮುಖರ್ಜಿ (ಪಿಟಿಐ ಸಂಗ್ರಹ ಚಿತ್ರ)
ನವದೆಹಲಿ: 2012ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಮುನ್ನ ಶಿವಸೇನೆಯ ಮುಖ್ಯಸ್ಥ ದಿವಂಗತ ಬಾಳಾ ಠಾಕ್ರೆಯವರನ್ನು ಭೇಟಿ ಮಾಡಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಹೋಗಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿಟ್ಟಾಗಿದ್ದರಂತೆ. ಬಾಳಾ ಠಾಕ್ರೆಯವರನ್ನು ಭೇಟಿ ಮಾಡದಂತೆ ಪ್ರಣಬ್ ಮುಖರ್ಜಿಯವರಿಗೆ ಸೋನಿಯಾ ಗಾಂಧಿ ಸಲಹೆ ನೀಡಿದ್ದರಂತೆ. ಅವರ ಮಾತನ್ನು ಮೀರಿ ಹೋಗಿದ್ದು ಸಿಟ್ಟು ತರಿಸಿತ್ತು ಎಂದು ಅವರ ಆತ್ಮಚರಿತ್ರೆಯ ಮೂರನೇ ಸಂಪುಟದಲ್ಲಿ ಬರೆದಿದ್ದಾರೆ.
2012ರಲ್ಲಿ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಾಳಾ ಠಾಕ್ರೆ ಮುಂಬೈಯಲ್ಲಿರುವ ತಮ್ಮ ನಿವಾಸ ಮಾತೊಶ್ರಿಗೆ ಪ್ರಣಬ್ ಮುಖರ್ಜಿಯವರಿಗೆ ಭೇಟಿ ನೀಡಲು ವ್ಯವಸ್ಥೆ ಕಲ್ಪಿಸಿದ್ದರು. ಠಾಕ್ರೆಯವರನ್ನು ಭೇಟಿ ಮಾಡುವಂತೆ ಮುಖರ್ಜಿಯವರಿಗೆ ಒತ್ತಾಯ ಮಾಡಿದ್ದು ಯುಪಿಎಯ ಮೈತ್ರಿ ಪಕ್ಷವಾಗಿದ್ದ ಎನ್ ಸಿಪಿಯ ನಾಯಕ ಶರದ್ ಪವಾರ್.
''ಕೊಲಿಶನ್ ಇಯರ್ಸ್ 1996-2012''(ಒಕ್ಕೂಟದ ವರ್ಷಗಳು: 1996-2012) ಎಂಬ ತಮ್ಮ ಆತ್ಮ ಚರಿತ್ರೆಯ ಮೂರನೇ ಸಂಪುಟದಲ್ಲಿ ಮುಖರ್ಜಿಯವರು ತಾವು ಠಾಕ್ರೆಯವರನ್ನು ಭೇಟಿ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಯುಪಿಎಯನ್ನು ಅದಾಗಲೇ ತೊರೆದಿದ್ದ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಜೊತೆಗೆ ಎನ್ ಸಿಪಿಯನ್ನು ಪಾಲುದಾರರಾಗಿ ಉತ್ತಮ ಸಾಮರಸ್ಯದಲ್ಲಿ ಇಡುವುದು ಉದ್ದೇಶವಾಗಿತ್ತು ಎಂದು ಪ್ರಣಬ್ ಮುಖರ್ಜಿ ವಿವರಿಸಿದ್ದಾರೆ.
2012ರ ಜುಲೈ 13ರಂದು ಮುಂಬೈಗೆ ಭೇಟಿ ನೀಡಿದ್ದು ಮುಂಬೈಯಲ್ಲಿ ಬಾಳಾ ಠಾಕ್ರೆಯವರನ್ನು ಭೇಟಿ ಮಾಡಿದ್ದು ಮಹತ್ವದ್ದಾಗಿತ್ತು, ಯಾಕೆಂದರೆ ಶಿವಸೇನೆ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮೈತ್ರಿಕೂಟದ ಭಾಗವಾಗಿತ್ತು. ಆದರೂ ಕೂಡ ಶಿವಸೇನೆ ತಮಗೆ ಬೆಂಬಲ ನೀಡಿದ್ದು ಅನಿರೀಕ್ಷಿತವಾಗಿತ್ತು ಎನ್ನುತ್ತಾರೆ ಪ್ರಣಬ್ ಮುಖರ್ಜಿ.
ಬಾಳಾ ಠಾಕ್ರೆಯವರನ್ನು ಪ್ರಭಾವಗೊಳಿಸಲು ಅವರನ್ನು ಮುಂಬೈ ಭೇಟಿ ಮಾಡಬೇಕೆ ಎಂದು ನಾನು ಸೋನಿಯಾ ಗಾಂಧಿ ಮತ್ತು ಶರದ್ ಪವಾರ್ ಇಬ್ಬರನ್ನೂ ಕೇಳಿದೆ. ಅವರ ಜೊತೆ ನಿವಾಸದಲ್ಲಿ ಮಾತುಕತೆ ನಡೆಸಲು ಬರುವಂತೆ ಬಾಳಾ ಠಾಕ್ರೆಯವರಿಂದ ಹಲವು ಸಲ ಸಂದೇಶಗಳು ಬಂದಿದ್ದವು. ಆದರೆ ಸೋನಿಯಾ ಗಾಂಧಿಯವರಿಗೆ ನಾನು ಠಾಕ್ರೆಯವರನ್ನು ಭೇಟಿ ಮಾಡುವುದು ಇಷ್ಟವಿರಲಿಲ್ಲ. ಸಾಧ್ಯವಾದರೆ ನಮ್ಮಿಬ್ಬರ ಭೇಟಿಯನ್ನು ತಪ್ಪಿಸಬೇಕೆಂದುಕೊಂಡಿದ್ದರು. ಬಾಳಾ ಠಾಕ್ರೆಯವರ ನೀತಿಗಳ ಕುರಿತು ಸೋನಿಯಾ ಗಾಂಧಿಯವರು ತಮ್ಮದೇ ಆದ ಗ್ರಹಿಕೆಯನ್ನು ಹೊಂದಿದ್ದರು ಎಂದು ಪುಸ್ತಕದಲ್ಲಿ ವಿವರಿಸಿದ್ದಾರೆ.
ಬಾಳಾ ಠಾಕ್ರೆಯವರ ಜೊತೆಗಿನ ಭೇಟಿ ಬಹಳ ಸೌಜನ್ಯಯುತವಾಗಿತ್ತು. ಭೇಟಿ ಸಂದರ್ಭದಲ್ಲಿ ಮಾತನಾಡುವಾಗ ಅವರು ಮರಾಠಾ ಹುಲಿ ಬಂಗಾಳ ಹುಲಿಗೆ ಬೆಂಬಲ ನೀಡಬೇಕಾಗಿರುವುದು ಸಹಜ ಎಂದು ತಮಾಷೆ ಮಾಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.
ರಾಜಕೀಯದಲ್ಲಿ ಪಂಥೀಯ ಮನೋಧರ್ಮ ಹೊಂದಿದವರು ಬಾಳಾ ಠಾಕ್ರೆ ಎಂದು ನನಗೆ ಗೊತ್ತಿತ್ತು. ಆದರೆ ಅದೇ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸುವ ಮಟ್ಟದ ಹಾದಿ ಅವರು ಅನುಸರಿಸಿದ್ದರು ಎಂಬ ವಾಸ್ತವವನ್ನು ನಾನಿಲ್ಲಿ ಹೇಳಲೇಬೇಕು. 2007ರಲ್ಲಿ ತಮ್ಮ ಹಿಂದಿನ ರಾಷ್ಟ್ರಪಟಿ ಪ್ರತಿಭಾ ಪಾಟೀಲ್ ಅವರು ಮಹಾರಾಷ್ಟ್ರದವರೆಂದು ಶಿವಸೇನೆ ಅವರನ್ನು ಬೆಂಬಲಿಸಿತ್ತು ಎಂದಿದ್ದಾರೆ.
ನನ್ನ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಬಾಳಾ ಠಾಕ್ರೆ ನನ್ನನ್ನು ಬೆಂಬಲಿಸಿದ್ದರು. ಬೇರೆ ಕಾಂಗ್ರೆಸ್ ರಾಜಕಾರಣಿಗಳಿಗಿಂತ ವಿಭಿನ್ನ ಗುಣವನ್ನು ನಿಮ್ಮಲ್ಲಿ ಕಾಣುತ್ತಿದ್ದೇನೆ ಎಂದು ನನಗವರು ಹೇಳಿದ್ದರು. ಕಾರಣ ಏನೇ ಇರಲಿ, ನನಗೆ ಅವರು ಬೆಂಬಲ ನೀಡಿದ್ದಕ್ಕೆ ವೈಯಕ್ತಿಕವಾಗಿ ನಾನು ಅವರಿಗೆ ಧನ್ಯವಾದ ಹೇಳಲೇಬೇಕು ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಆದರೆ ಮುಖರ್ಜಿಯವರು ಮರುದಿನ ಬೆಳಗ್ಗೆ ದೆಹಲಿಗೆ ಹಿಂತಿರುಗಿದಾಗ, ಗಿರಿಜಾ ವ್ಯಾಸ ಅವರು ನನ್ನ ಬಳಿ ಬಂದು ನೀವು ಬಾಳಾ ಠಾಕ್ರೆಯವರನ್ನು ಭೇಟಿ ಮಾಡಿದ್ದು ಸೋನಿಯಾ ಗಾಂಧಿ ಮತ್ತು ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರಿಗೆ ಸರಿ ಕಂಡಿಲ್ಲ, ಸಿಟ್ಟಾಗಿದ್ದಾರೆ ಎಂದರು.
ಅವರ ಸಿಟ್ಟು, ಬೇಸರ ನನಗೆ ಅರ್ಥವಾಗಿತ್ತು. ಆದರೆ ನನಗೆ ಸರಿ ಅನಿಸಿದ್ದನ್ನು ನಾನು ಆ ಸಂದರ್ಭದಲ್ಲಿ ಮಾಡಿದ್ದೆ. ಯುಪಿಎ-2 ಆಳ್ವಿಕೆ ಸಮಯದಲ್ಲಿ ಶರದ್ ಪವಾರ್ ನೀಡಿದ್ದ ಸೂಕ್ಷ್ಮ ಸಲಹೆಗಳನ್ನು ನಾನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗಿತ್ತು. ಆಗ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಯುಪಿಎ ಮೈತ್ರಿಕೂಟದಿಂದ ಮತ್ತು ರಾಷ್ಟ್ರಪತಿ ಚುನಾವಣೆಯಿಂದ ಹೊರಬಂದಿತ್ತು. ಅದೇ ರೀತಿ ಶರದ್ ಪವಾರ್ ಕೂಡ ಅದೇ ರೀತಿ ಅಸಮಾಧಾನಗೊಂಡಿದ್ದರೆ ಯುಪಿಎಗೆ ಅದು ಚೆನ್ನಾಗಿರುತ್ತಿರಲಿಲ್ಲ. ಯುಪಿಎ ಮೈತ್ರಿಕೂಟದ ಆಡಳಿತಾವಧಿ ಮತ್ತೆ ಎರಡು ವರ್ಷಗಳ ಕಾಲವಿತ್ತು. ಮೈತ್ರಿ ಪಕ್ಷಗಳ ಪರಿಣಾಮಾತ್ಮಕ ಮಧ್ಯ ಪ್ರವೇಶ ಮತ್ತು ಬೆಂಬಲವಿಲ್ಲದಿದ್ದರೆ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಪುಸ್ತಕದಲ್ಲಿ ಮುಖರ್ಜಿ ವಿವರಿಸಿದ್ದಾರೆ.
ಅದಾಗಲೇ ಶರದ್ ಪವಾರ್ ಅವರಿಗೆ ಅನೇಕ ವಿಷಯಗಳಲ್ಲಿ ಅಸಮಾಧಾನವುಂಟಾಗಿತ್ತು. ಯುಪಿಎ ಮೈತ್ರಿಕೂಟದ ಪಕ್ಷಗಳ ನಡುವೆ ಅನೇಕ ವಿಷಯಗಳಲ್ಲಿ ಒತ್ತಡಗಳಿದ್ದವು. ಮತ್ತೆ ಅವರು ಅಸಂತುಷ್ಟರಾಗುವುದು ನನಗೆ ಇಷ್ಟವಿರಲಿಲ್ಲ. ನಾನು ಠಾಕ್ರೆ ಭೇಟಿ ವಿಚಾರವನ್ನು ಸೋನಿಯಾ ಗಾಂಧಿಯವರ ಜೊತೆಯಾಗಲಿ, ಅಹ್ಮದ್ ಪಟೇಲ್ ಅವರೊಂದಿಗಾಗಲಿ ಪ್ರಸ್ತಾಪ ಮಾಡಲಿಲ್ಲ. ಆ ವಿಷಯವನ್ನು ಅಲ್ಲಿಗೇ ಬಿಟ್ಟುಬಿಟ್ಟೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೂಡ ತಮಗೆ ಬೆಂಬಲ ನೀಡಿದ್ದನ್ನು ಮುಖರ್ಜಿ ಸ್ಮರಿಸಿದರು.ತಾನು ಬಹಿರಂಗವಾಗಿ ಬೆಂಬಲ ಘೋಷಿಸಿರುವುದರಿಂದ ಬಿಹಾರಕ್ಕೆ ಭೇಟಿ ನೀಡುವುದು ಬೇಡವೆಂದು ನಿತೀಶ್ ಕುಮಾರ್ ಹೇಳಿದ್ದರು. ಎನ್ ಡಿಎ ಬೆಂಬಲಿಗರಾಗಿದ್ದ ಅವರು, ನಾನು ಪಾಟ್ನಾಗೆ ಹೋಗುತ್ತಿದ್ದರೆ ನನ್ನನ್ನು ಬರಮಾಡಿಕೊಳ್ಳುವುದು ನಿತೀಶ್ ಕುಮಾರ್ ಅವರಿಗೆ ಮುಜುಗರವಾಗುತ್ತಿತ್ತು ಎಂದು ಪ್ರಣಬ್ ಮುಖರ್ಜಿ ತಮ್ಮ ಆತ್ಮಚರಿತ್ರೆ ಪುಸ್ತಕದಲ್ಲಿ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com