ನವದೆಹಲಿ: ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್ ಕಡ್ಡಾಯವಾಗಿ ಇರಬೇಕು. ರೈಲು ಪ್ರಯಾಣದ ವೇಳೆ ಯಾರಿಗೇ ಆಗಲಿ ಉಸಿರಾಟದ ಸಮಸ್ಯೆ ಕಂಡು ಬಂದರೆ ಅವರಿಗೆ ತಕ್ಷಣ ಆಮ್ಲಜನಕ ಪೂರೈಕೆ ಆಗಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡಿದ್ದ ಪೀಠಈ ಆದೇಶ ನೀಡಿದೆ.
ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್ ಇಟ್ಟುಕೊಳ್ಳಲು ಮತ್ತು ಪ್ರಯಾಣಿಕರು ಉಸಿರಾಟ ಸಮಸ್ಯೆ ಗೆ ಸಿಲುಕಿದಾಗ ಅವರಿಗೆ ಆಮ್ಲಜನಕ ಪೂರೈಸುವುದು ಕಡ್ಡಾಯ. ಈ ಸಂಬಂಧ ಏಮ್ಸ್ ನಿಂದ ನಿರ್ದೇಶನಗಳನ್ನು ಪಡೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಭಾರತೀಯ ರೈಲ್ವೆಗೆ ನಿರ್ದೇಶಿಸಿದೆ.
ಅನಾರೋಗ್ಯ ಪೀಡಿತ ಪ್ರಯಾಣಿಕರು ಇಲ್ಲವೇ ಸಂಬಂಧಿಕರು ಟಿಕೆಟ್ ಕಲೆಕ್ಟರ್ ಗೆ ವಿಷಯ ತಿಳಿಸಿ ಆಮ್ಲಜನಕ ಸಿಲಿಂದರ್ ಪಡೆದುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಮುಂದಿನ ನಿಲ್ದಾಣದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ದೂರ ಪ್ರದೇಶಗಳಿಗೆ ಸಂಚರಿಸುವ ರೈಲುಗಳಲ್ಲಿ ಓರ್ವ ವೈದ್ಯಾಧಿಕಾರಿ, ಓರ್ವ ನರ್ಸ್ ಸೇರಿದಂತೆ ಅಗತ್ಯ ವೈದ್ಯಕೀಯ ತಂಡ ಇರಬೇಕು ಎಂದ ರಾಜಸ್ಥಾನ ಹೈಕೋರ್ಟ್ ನ ಆದೇಶ ಪ್ರಶ್ನಿಸಿ ಕೇಂದ್ರ ಸಲ್ಲಿಸಿದ್ದ ಮನವಿ ವಿಚಾರಣೆ ನಂತರ ಸುಪ್ರಿಓ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ.