ಕೇದಾರನಾಥವನ್ನು ಮಾದರಿ ತೀರ್ಥಯಾತ್ರಾ ಕ್ಷೇತ್ರವನ್ನಾಗಿ ಮಾಡುವೆ: ಪ್ರಧಾನಿ ಮೋದಿ

ಉತ್ತರಾಖಂಡದ ಕೇದಾರನಾಥವನ್ನು ತೀರ್ಥಯಾತ್ರೆಯ ಮಾದರಿ ಕ್ಷೇತ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ...
ಕೇದಾರನಾಥದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಕೇದಾರನಾಥದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥವನ್ನು ತೀರ್ಥಯಾತ್ರೆಯ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಆರು ತಿಂಗಳ ಬಳಿಕ ಕೇದಾರನಾಥ ದೇವಸ್ಥಾನ ಬಾಗಿಲು ಇಂದು ತೆರೆದಿದ್ದು, ದೇವಸ್ಥಾನಕ್ಕೆ ಇಂದು ಬೆಳಗ್ಗೆ ಪ್ರಧಾನಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಪ್ರಧಾನ ಮಂತ್ರಿ, ಕೇದಾರನಾಥ ಕೇವಲ ತೀರ್ಥಯಾತ್ರೆಯ ಸ್ಥಳ ಮಾತ್ರವಲ್ಲ, ಇದು ಸಾಹಸ ಕ್ರೀಡೆಗಳಿಗೆ, ಪ್ರಾಕೃತಿಕ ಸೌಂದರ್ಯವನ್ನು ತೋರಿಸುವ ಮತ್ತು ಮಾದರಿ ಪರಿಸರ ಸ್ಥಳವಾಗಿದೆ. ಹೀಗಾಗಿ ಇದನ್ನು ಪ್ರಮುಖ ತೀರ್ಥ ಯಾತ್ರೆ ಸ್ಥಳ ತಾಣವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ ಎಂದರು.
ಹಿಮಾಲಯ ಧಾರ್ಮಿಕವಾಗಿ ಮತ್ತು ಪರಿಸರ ಪ್ರೇಮಿಗಳಿಗೆ ಪ್ರಶಸ್ತ ಜಾಗವಾಗಿದೆ. ಜಲ ಕ್ರೀಡೆ, ಸಾಹಸ ಕ್ರೀಡೆಗಳಿಗೆ ಇದು ಸೂಕ್ತ ಸ್ಥಳವಾಗಿದೆ. ಇಲ್ಲಿನ ಸೌಂದರ್ಯವನ್ನು ಹೊರ ಜಗತ್ತಿಗೆ ತಿಳಿಸಬೇಕಾಗಿದೆ. ಕೇದಾರನಾಥದಲ್ಲಿ ದೇವಸ್ಥಾನದ ಪುನರ್ನಿರ್ಮಾಣ ಮಾಡುವ ಮೂಲಕ ಒಂದು ಮಾದರಿ ತೀರ್ಥ ಕ್ಷೇತ್ರ ಹೇಗಿರಬೇಕೆಂಬುದನ್ನು ಜಗತ್ತಿಗೆ ತೋರಿಸಬೇಕು ಎಂದು ಪ್ರಧಾನಿ ಹೇಳಿದರು.
ಕೇದಾರನಾಥವನ್ನು ಅಭಿವೃದ್ಧಿಪಡಿಸುವಾಗ ಪರಿಸರಕ್ಕೆ ಯಾವುದೇ ರೀತಿಯಲ್ಲಿಯೂ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗುವುದು. ಕೇದಾರನಾಥದಲ್ಲಿ ಗುಣಮಟ್ಟದ ಮೂಲಸೌಕರ್ಯಕ್ಕೆ ಒತ್ತು ನೀಡಲಾಗುವುದು. ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು ಆಧುನಿಕ ಸ್ಪರ್ಷವನ್ನು ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಪ್ರಧಾನಿ ಭರವಸೆ ನೀಡಿದರು. 
ಗುಜರಾತಿಯರಿಗೆ ಇಂದು ಹೊಸ ವರ್ಷದ ಆರಂಭವಾಗಿದ್ದು ಪ್ರಧಾನಿ ತಮ್ಮ ಹುಟ್ಟೂರಿನ ಜನತೆಗೆ ಶುಭ ಕೋರಿದರು, ಜನಸೇವೆ ಮಾಡುವುದು ಪ್ರಭು ಸೇವೆ ಮಾಡಿದಂತೆ. 2022ರಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುತ್ತಿದ್ದು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಅಷ್ಟು ಹೊತ್ತಿಗೆ ಈಡೇರಿಸಲು ನನ್ನನ್ನು ನಾನು ಸಮರ್ಪಿಸಿಕೊಳ್ಳಲು ನಾನು ದೇವರ ಆಶೀರ್ವಾದ ಕೇಳುತ್ತೇನೆ ಎಂದು ಪ್ರಧಾನಿ ಹೇಳಿದರು.ಇಂದು ದೇಶದ ಪ್ರಧಾನಿಯಾಗಿ ಕೇದಾರನಾಥದ ಜನರ ಸೇವೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದರು. 

2013ರಲ್ಲಿ ಉತ್ತರಾಖಂಡದಲ್ಲಿ ಉಂಟಾದ ಭಾರೀ ಪ್ರವಾಹ ಮರೆಯಲು ಸಾಧ್ಯವಿಲ್ಲ. ಭೂ ಕುಸಿತುವುಂಟಾಗಿ ಸಾವಿರಾರು ಮಂದಿ ನೆಲೆ ಕಳೆದುಕೊಂಡರು. ಅಪಾರ ಪ್ರಮಾಣದ ಹಾನಿ, ಸಾವು, ನೋವು ಸಂಭವಿಸಿತ್ತು.  ಆ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ತಾನು ಕೇದಾರನಾಥದ ಪುನರ್ನಿರ್ಮಾಣ ಕಾರ್ಯವನ್ನು ಗುಜರಾತ್ ಸರ್ಕಾರಕ್ಕೆ ನೀಡಬೇಕೆಂದು ಉತ್ತರಾಖಂಡ ಮುಖ್ಯಮಂತ್ರಿಗಳನ್ನು ಮನವಿ ಮಾಡಿಕೊಂಡೆ.  ಆಗ ಅಂದಿನ ಉತ್ತರಾಖಂಡ ಮುಖ್ಯಮಂತ್ರಿ ಒಪ್ಪಿಕೊಂಡಿದ್ದರು. ಆದರೆ ಕೇಂದ್ರದಲ್ಲಿನ ಆಗಿನ ಯುಪಿಎ ಸರ್ಕಾರ ಉತ್ತರಾಖಂಡ ಸರ್ಕಾರದ ಮೇಲೆ ಗುಜರಾತ್  ಸರ್ಕಾರದ ಸಹಾಯ ಪಡೆಯದಂತೆ ಒತ್ತಡ ಹೇರಿತು. ಗುಜರಾತ್ ನ ಸಹಾಯ ಬೇಡವೆಂದು, ತಮ್ಮ ರಾಜ್ಯವೇ ಪರಿಸ್ಥಿತಿಯನ್ನು ನಿಭಾಯಿಸುತ್ತದೆ ಎಂದು ಹೇಳುವಂತೆ ಮುಖ್ಯಮಂತ್ರಿಗಳು ಹೇಳುವಂತೆ ಕೇಂದ್ರದ ಅಂದಿನ ನಾಯಕರು ಒತ್ತಡ ತಂದರು ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಆರೋಪಿಸಿದರು.
ಕಳೆದ ಫೆಬ್ರವರಿಯ ವಿಧಾನಸಭೆ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಬಿಜೆಪಿ ಜಯಗಳಿಸಿದ ನಂತರ ದೇವಸ್ಥಾನದ ಪುನರ್ನಿರ್ಮಾಣ ಕಾರ್ಯಕ್ಕೆ ನಾನು ಚಾಲನೆ ನೀಡಲು ಬಾಬಾ ದೇವರು ಆಶೀರ್ವಾದ ನೀಡಿದ್ದಾರೆ ಎಂದು ನನಗೆ ಮನವರಿಕೆಯಾಗಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪ್ರಧಾನಿ ಕೇದಾರ್ ಪುರಿಯಲ್ಲಿ ದೇವಸ್ಥಾನದ ಪುನರ್ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 2013ರಲ್ಲಿ ಉಂಟಾಗಿದ್ದ ಭೀಕರ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ಆದಿ ಗುರು ಶಂಕರಾಚಾರ್ಯರ ಸಮಾಧಿಯ ನವೀಕರಣ ಕಾರ್ಯವೂ ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com