ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರ ದೇಶದ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಗುರುವಾರ ಆರೋಪಿಸಿದ್ದಾರೆ.
ಇಂದು ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ಆರ್ಥಿಕತೆ ಚೇತರಿಕೆಗಾಗಿ ಸ್ಟಾರ್ಟ್ ಅಪ್ ಇಂಡಿಯಾವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದು ಶಟ್ ಅಪ್ ಇಂಡಿಯಾ ಆಗಬಾರದು ಎಂದು ಹೇಳಿದ್ದಾರೆ.
ಸರ್ಕಾರಕ್ಕೂ ಜನರ ಮೇಲೆ ನಂಬಿಕೆ ಇಲ್ಲ. ಜನರನ್ನು ಕಳ್ಳರಂತೆ ನೋಡುತ್ತಿದೆ. ಆದರೆ ಎಲ್ಲ ಹಣವು ಕಪ್ಪಲ್ಲ, ಎಲ್ಲ ಕಪ್ಪು ನಗದಲ್ಲ. ಪ್ರಧಾನಿ ಮೋದಿ ತಮ್ಮ ದೊಡ್ಡ ಎದೆ ಹಾಗೂ ಸಣ್ಣ ಹೃದಯದಿಂದ ಅಧಿಕಾರ ಬಳಕೆ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ವ್ಯಾಪಾರಸ್ಥರು ವಿಶ್ವಾಸದ ಮನಸ್ಥಿತಿಯಲ್ಲಿ ವ್ಯವಹಾರ ಮಾಡುತ್ತಾರೆ. ಆದರೆ ಈ ಸರ್ಕಾರದ ಮೇಲಿನ ವಿಶ್ವಾಸವೇ ಸತ್ತುಹೋಗಿದೆ. ಪ್ರಧಾನಿಗಳು ಹಾಗೂ ಸರ್ಕಾರ ಪ್ರತಿಯೊಬ್ಬರನ್ನು ಕಳ್ಳರಂತೆ ನೋಡುತ್ತಿದೆ. ಒಬ್ಬರ ಮಾತನ್ನು ಕೇಳಿಸಿಕೊಳ್ಳುವ ಮೂಲಕ ವಿಶ್ವಾಸವನ್ನು ಬೆಳೆಸಬಹುದು. ಆದರೆ ಇವತ್ತು ಸರ್ಕಾರದ ಯಾರೊಬ್ಬರು ಜನರ ನೋವು- ಸಂಕಷ್ಟವನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಇದೇ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧವೂ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಜೇಟ್ಲಿ ಅವರು ಟಿವಿ ಚಾನಲ್ ಗಳಿಗೆ ಹೋಗಿ ಎಲ್ಲವೂ ಸರಿಯಾಗಿದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಜಿಎಸ್ ಟಿ ಮತ್ತು ನೋಟ್ ನಿಷೇಧ ದೇಶದ ಆರ್ಥಿಕತೆ ನೆಲ ಕಚ್ಚುವಂತೆ ಮಾಡಿದೆ ಎಂದರು.