ನವದೆಹಲಿ: ಆಗ್ರಾದಲ್ಲಿ ಸ್ವಿಡ್ಜರ್'ಲ್ಯಾಂಡ್ ದಂಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇತರೆ ಮೂವರಿಗಾಗಿ ತೀವ್ರ ಶೋಧ ನಡೆಸುತ್ತಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ,
ಸ್ವಿಸ್ ದಂಪತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಇಂದು ಆಗ್ರ-ರಾಜಸ್ತಾನ ಗಡಿಯಲ್ಲಿ ಬಂಧಿಸಿದ್ದೇವೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಚಂದ್ರ ಪ್ರಕಾಶ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಸ್ವಿಡ್ಜರ್'ಲ್ಯಾಂಡ್ ದಂಪತಿಗಳು ಕಳೆದ ಭಾನುವಾರ ಆಗ್ರಾದ ಫತೇಪುರ್ ಸಿಕ್ರಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕೆಲ ಕಿಡಿಗೇಡಿಗಳು ದಂಪತಿ ಬಗ್ಗೆ ಕೆಟ್ಟ ಪದಗಳನ್ನು ಬಳಕೆ ಮಾಡಿ ಮಾತನಾಡಿದ್ದಾರೆ. ಅಲ್ಲದೆ, ಸೆಲ್ಫೀ ತೆಗೆದುಕೊಳ್ಳುತ್ತಿದ್ದ ದಂಪತಿಗಳನ್ನು ತಡೆದು ಥಳಿಸಿದ್ದರು. ಹಲ್ಲೆಗೊಳಗಾದ ಸ್ವಿಸ್ ದಂಪತಿಗಳು ಆಗ್ರಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.
ತಮ್ಮ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸ್ವಿಸ್ ದಂಪತಿಗಳು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ಆದರೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಪ್ರಕಾಶ್ ಅವರು ತಿಳಿಸಿದ್ದಾರೆ.