ಉಜ್ಜಯಿನಿ ಶಿವಲಿಂಗದ ಅಭಿಷೇಕಕ್ಕೆ ಪಂಚಾಮೃತ ಇಲ್ಲ, ಇನ್ಮುಂದೆ ಆರ್ ಒ ನೀರು ಮಾತ್ರ ಬಳಕೆ: ಸುಪ್ರೀಂ

ಉಜ್ಜಯಿನಿಯ ಪ್ರಖ್ಯಾತ ಶಿವನ ದೇವಸ್ಥಾನವಾದ ಮಹಾಕಾಳೇಶ್ವರ ಗರ್ಭಗುಡಿಯಲ್ಲಿರುವ ಶಿವಲಿಂಗ ....
ದೇವಾಲಯದ ಶಿವಲಿಂಗ
ದೇವಾಲಯದ ಶಿವಲಿಂಗ
ಉಜ್ಜಯಿನಿ: ಉಜ್ಜಯಿನಿಯ ಪ್ರಖ್ಯಾತ ಶಿವನ ದೇವಸ್ಥಾನವಾದ ಮಹಾಕಾಳೇಶ್ವರ ಗರ್ಭಗುಡಿಯಲ್ಲಿರುವ ಶಿವಲಿಂಗ ಕುಗ್ಗುತ್ತಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಪೂಜಾ ವಿಧಾನದ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ.
ಶಿವನಿಗೆ ಜಲ ಅಭಿಷೇಕಕ್ಕೆ ಪ್ರತಿಯೊಬ್ಬ ಭಕ್ತಾದಿ ಕೇವಲ ಅರ್ಧ ಲೀಟರ್ ನಷ್ಟು  ಆರ್ ಒ (ಶುದ್ಧೀಕರಿಸಿದ) ನೀರನ್ನು ಬಳಸಬಹುದೆಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ. 
ಪಂಚಾಮೃತ ಮತ್ತು ಬಾಂಗ್ ಶೃಂಗಾರ್ ಯಥೇಚ್ಛವಾಗಿ ಬಳಸುವುದರಿಂದ ಶಿವಲಿಂಗದ ಗಾತ್ರ ಕುಸಿಯುತ್ತಿದೆ ಎಂದು ಉಜ್ಜಯಿನಿ ವಿದ್ವತ್ ಪರಿಷತ್ ಎಂಬ ಬುದ್ಧಿಜೀವಿಗಳ ವಾದ ಚರ್ಚೆಗೀಡು ಮಾಡಿತ್ತು. 
ಶಿವಲಿಂಗಕ್ಕೆ ಅಭಿಷೇಕ ಮಾಡುವ ಪಂಚಾಮೃತದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಕೂಡ ಪರಿಷತ್ ಸದಸ್ಯರು ಒತ್ತಾಯಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮೊಸರು, ತುಪ್ಪ, ಸಕ್ಕರೆ ಅಭಿಷೇಕಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಒಂದು ಕಾಲು ಲೀಟರ್ ಹಾಲನ್ನು ಮಾತ್ರ ಬಳಕೆ ಮಾಡಬೇಕು, ಪ್ರತಿಯೊಬ್ಬ ಭಕ್ತಾದಿಯೂ ಅಭಿಷೇಕಕ್ಕೆ   ನಿಗದಿಪಡಿಸಿರುವ ಪ್ರಮಾಣದಲ್ಲೇ ಹಾಲನ್ನು ಶಿವಲಿಂಗಕ್ಕೆ ಸಲ್ಲಿಸಬೇಕೆಂದೂ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಈ ಬಗ್ಗೆ ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ತಜ್ಞರ ತಂಡ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಾಮರ್ಶಿಸಿತ್ತು. ತಂಡ ಉಜ್ಜಯಿನಿ ವಿದ್ವತ್ ಪರಿಷತ್ ಗೆ ವಿರುದ್ಧವಾಗಿ ತನ್ನ ಅಭಿಪ್ರಾಯವನ್ನು ಹೇಳಿದ್ದರೂ ಕೂಡ ಶಿವಲಿಂಗವನ್ನು ಕಾಪಾಡಲು ಭಕ್ತರು ನೀಡುವ ಕೆಲವು ಹರಕೆಗಳಿಗೆ ನಿರ್ಬಂಧ ಹೇರಬೇಕೆಂದು ಸಲಹೆ ನೀಡಿತ್ತು.
ಸಮಿತಿ ತನ್ನ ವರದಿಯಲ್ಲಿ ಶಿವಲಿಂಗಕ್ಕೆ ಅರ್ಪಿಸುವ ಬಾಂಗವನ್ನು, ಗಂಗಾಜಲ ಮತ್ತು ಪಂಚಾಮೃತದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com