ಡಾರ್ಜಿಲಿಂಗ್ ನಿಂದ ಭದ್ರತಾ ಪಡೆ ಹಿಂಪಡೆಯಲು ಕೇಂದ್ರಕ್ಕೆ ಸುಪ್ರೀಂ ಅನುಮತಿ

ಪಶ್ಚಿಮ ಬಂಗಾಳದ ಹಿಂಸಾಚಾರ ಪೀಡಿತ ಡಾರ್ಜಿಲಿಂಗ್ ಮತ್ತು ಕಲಿಂಪೊಂಗ್ ಜಿಲ್ಲೆಗಳಿಂದ ಕೇಂದ್ರೀಯ ಭದ್ರತಾ ಪಡೆಯ 15 ತುಕಡಿಗಳ....
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಪಶ್ಚಿಮ ಬಂಗಾಳದ ಸಮಸ್ಯೆ ಪೀಡಿತ ಡಾರ್ಜಿಲಿಂಗ್ ಮತ್ತು ಕಲಿಂಪೊಂಗ್ ಜಿಲ್ಲೆಗಳಿಂದ ಕೇಂದ್ರೀಯ ಭದ್ರತಾ ಪಡೆಯ 15 ತುಕಡಿಗಳ ಪೈಕಿ 7 ತುಕಡಿಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಕಳೆದ ವಾರ ಡಾರ್ಜಿಲಿಂಗ್ ನಿಂದ ಕೇಂದ್ರೀಯ ಭದ್ರತಾ ಪಡೆಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ಆದೇಶಕ್ಕೆ ಕೋಲ್ಕತಾ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಗೆ ಬಳಸಲು ಕೇಂದ್ರೀಯ ಭದ್ರತಾ ಪಡೆಯ ಏಳು ತುಕಡಿಗಳನ್ನು ಹಿಂಪಡೆಯಲು ಅನುಮತಿ ನೀಡಿದೆ. ಅಲ್ಲದೆ ಈ ಸಂಬಂಧ ಒಂದು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.
ಕೇಂದ್ರೀಯ ಪಡೆಯ 10 ತುಕಡಿಗಳನ್ನು ಅಕ್ಟೋಬರ್ 16ರಿಂದ ಹಿಂಪಡೆಯುತ್ತಿರುವುದಾಗಿ ಹಾಗೂ ಉಳಿದ ಐದು ತುಕಡಿಗಳನ್ನು ಅಕ್ಟೋಬರ್ 20ರ ನಂತರ ಹಿಂಪಡೆಯುವುದಾಗಿ ಕಳೆದ ಭಾನುವಾರ ಕೇಂದ್ರ ಗೃಹ ಸಚಿವಾಲಯ ತಿಳಿಸಿತ್ತು. ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ ಡಾರ್ಜಿಲಿಂಗ್ ನಿಂದ ಕೇಂದ್ರೀಯ ಪಡೆಗಳನ್ನು ಹಿಂಪಡೆಯುತ್ತಿರುವುದು ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿಯೂ ಕೆಟ್ಟ ನಿರ್ಧಾರ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com