ಉತ್ತರ ಪ್ರದೇಶ: ಸರ್ಕಾರದ ಕಚೇರಿ ಸಂಪೂರ್ಣ ಕೇಸರಿಮಯ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ನಂತರ ಸಂಪೂರ್ಣ ಕೇಸರಿಮಯವಾಗುತ್ತಿದೆ ...
ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ನಂತರ ಸಂಪೂರ್ಣ ಕೇಸರಿಮಯವಾಗುತ್ತಿದೆ ಎಂದು ಹೇಳಬಹುದು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಗೆ ಕೇಸರಿ ಬಣ್ಣದ ಸ್ಪರ್ಶ ನೀಡಿರುವುದು ಪ್ರತಿಪಕ್ಷದವರ ಕಣ್ಣು ಕೆಂಪು ಮಾಡಿದೆ. ಸರ್ಕಾರದ ಈ ನಡೆಯನ್ನು ವಿರೋಧಿಸಿರುವ ಪ್ರತಿಪಕ್ಷ, ಆದಿತ್ಯನಾಥ್ ಅವರು ಉತ್ತರ ಪ್ರದೇಶ ರಾಜಕೀಯವನ್ನು ಕೇಸರೀಕರಣಗೊಳಿಸಲು ಹೊರಟಿದ್ದಾರೆ ಎಂದು ಆರೋಪಿಸಿವೆ.
ರಾಜಧಾನಿ ಲಕ್ನೊದಲ್ಲಿರುವ ಲಾಲ್ ಬಹದ್ದೂರು ಶಾಸ್ತ್ರಿ ಭವನದಲ್ಲಿರುವ ಮುಖ್ಯಮಂತ್ರಿಗಳ ಕಚೇರಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಕಚೇರಿಗೆ ಹಿಂದೆ ಇದ್ದ ಬಿಳಿ ಮತ್ತು ನೀಲಿ ಬಣ್ಣವನ್ನು ತೆಗೆದು ಕೇಸರಿ ಬಣ್ಣವನ್ನು ಹಚ್ಚಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಚೇರಿಯ ಹೊರ ಗೋಡೆಯಿಂದ ಹಿಡಿದು ಟೆರೇಸ್ ವರೆಗೆ ಪ್ರತಿಯೊಂದು ಕಡೆ ಕಟ್ಟಡಕ್ಕೆ ಕೇಸರಿ ಬಣ್ಣವನ್ನು ಬಳಿಯಲಾಗಿದೆ ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ನೀಲಿ ಮತ್ತು ಬಿಳಿ ಬಣ್ಣ ಹಚ್ಚುವುದು ಸಂಪ್ರದಾಯವಾಗಿತ್ತು. ಆದರೆ ಕಟ್ಟಡವನ್ನು ದುರಸ್ತಿ ಮಾಡಿ ಕೇಸರಿ ಬಣ್ಣ ಹಚ್ಚಬೇಕೆಂದು ಸರ್ಕಾರ ಇತ್ತೀಚೆಗೆ ಪ್ರಸ್ತಾವನೆ ನೀಡಿತ್ತು. ಅದಕ್ಕೆ ಒಪ್ಪಿಗೆ ಕೂಡ ಸಿಕ್ಕಿದೆ ಮತ್ತು ಕೆಲಸ ಈಗಾಗಲೇ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸನ್ಯಾಸಿ ರಾಜಕೀಯ ವ್ಯಕ್ತಿಯಾಗಿರುವ ಯೋಗಿ ಆದಿತ್ಯನಾಥ್ ಅವರನ್ನು ಶಿಷ್ಯರು ಮಹಾರಾಜ್ ಜಿ ಎಂದೇ ಈಗಲೂ ಸಂಬೋಧಿಸುವುದು. ಇವರು ಯಾವಾಗಲೂ ಕೇಸರಿ ಬಣ್ಣದ ಉಡುಪಿನ ಬಗ್ಗೆ ಒಲವು ಹೊಂದಿರುವವರು.
ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ನಂತರ ಅವರು ಕುಳಿತುಕೊಳ್ಳುವ ಕುರ್ಚಿ ಮತ್ತು ಪರದೆಯ ಬಣ್ಣ ಕೂಡ ಕೇಸರಿಯಾಗಿದೆ ಎಂದು ಮೂಲಗಳು ಹೇಳುತ್ತವೆ.
ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ 50 ಕೇಸರಿ ಬಣ್ಣದ ಬಸ್ಸುಗಳನ್ನು ಉದ್ಘಾಟಿಸಿದ್ದರು. ಅದರ ಉದ್ಘಾಟನೆಗೆ ವೇದಿಕೆಯನ್ನು ಕೂಡ ಕೇಸರಿ ಬಣ್ಣದ ಬಲೂನ್ ಗಳು ಮತ್ತು ಪರದೆಗಳಿಂದ ಅಲಂಕರಿಸಲಾಗಿತ್ತು.
ಇಷ್ಟೇ ಅಲ್ಲದೆ ಶಿಕ್ಷಣ ಇಲಾಖೆ ಇತ್ತೀಚೆಗೆ ಕೇಸರಿ ಬಣ್ಣದ ಬ್ಯಾಗುಗಳನ್ನು ವಿತರಿಸಿತ್ತು. 
ಇವೆಲ್ಲವೂ ವಿರೋಧ ಪಕ್ಷಗಳಿಗೆ ಸರಿಯಾಗಿ ಕಾಣುತ್ತಿಲ್ಲ. ಇದು ಸಂಪೂರ್ಣ ಕೇಸರೀಕರಣಮಾಡುವ ಹುನ್ನಾರ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಹೇಳಿದರು.
ಸರ್ಕಾರದ ಇಲಾಖೆಗಳಿಗೆ ನಿಗದಿತ ಬಣ್ಣ ನೀಡುವುದು ಅದು ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಬಣ್ಣವಾಗಿರುವುದರಿಂದ ಸರಿಯಾದ ನಡೆಯಲ್ಲ ಎಂದು ಕಾಂಗ್ರೆಸ್ ವಕ್ತಾರ ದ್ವಿಜೇಂದ್ರ ತ್ರಿಪಾಠಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com