ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎಸ್‌ಪಿಜಿ ಕಮಾಂಡೊ ನಾಪತ್ತೆ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ವಿಶೇಷ ರಕ್ಷಣಾ ತಂಡ(ಎಸ್‌ಪಿಜಿ)ದ ಕಮಾಂಡೊ ರಾಕೇಶ್ ಕುಮಾರ್....
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ವಿಶೇಷ ರಕ್ಷಣಾ ತಂಡ(ಎಸ್‌ಪಿಜಿ)ದ ಕಮಾಂಡೊ ರಾಕೇಶ್ ಕುಮಾರ್ ಅವರು ನಿಗೂಢವಾಗಿ ನಾಪತ್ತೆಯಾಗಿರುವುದು ಬುಧವಾರ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 3ರಿಂದ ರಾಕೇಶ್ ಕುಮಾರ್ ನಾಪತ್ತೆಯಾಗಿದ್ದು, ಕಮಾಂಡೊ ಪತ್ತೆಗೆ ಶೋಧ ನಡೆಸಲಾಗುತ್ತಿದ್ದು, ಇದುವರೆಗೆ ಅವರ ಸುಳಿವು ಸಿಕ್ಕಿಲ್ಲ. ಆದರೆ ನಾಪತ್ತೆಯಾದ ಸಂದರ್ಭ ರಾಕೇಶ್ ಅವರು ರಜೆಯಲ್ಲಿದ್ದರು ಎನ್ನಲಾಗಿದೆ.
31 ವರ್ಷ ವಯಸ್ಸಿನ ರಾಕೇಶ್ ಅವರು ದ್ವಾರಕಾ ಪ್ರದೇಶದ ಸೆಕ್ಟರ್‌ 8ರಲ್ಲಿರುವ ಫ್ಲ್ಯಾಟ್‌ ಒಂದರಲ್ಲಿ ಕುಟುಂಬದವರ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ನಾಪತ್ತೆಯಾಗಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ರಾಕೇಶ್ ಅವರ ತಂದೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ರಾಕೇಶ್ ಅವರು ಸೆಪ್ಟೆಂಬರ್ 1ರಂದು ಬೆಳಿಗ್ಗೆ ಸಮವಸ್ತ್ರದೊಂದಿಗೆ ಸೋನಿಯಾ ಅವರ ನಿವಾಸಕ್ಕೆ ಬಂದಿದ್ದರು. ಸಹೋದ್ಯೋಗಿಗಳ ಜತೆಗೂ ಮಾತುಕತೆ ನಡೆಸಿದ್ದರು. ನಂತರ, ಸುಮಾರು 11 ಗಂಟೆ ವೇಳೆಗೆ ಅಲ್ಲಿಂದ ತೆರಳಿದ್ದರು. ಈ ವೇಳೆ, ಅವರು ರಿವಾಲ್ವರ್ ಸಹ ಕೊಂಡೊಯ್ದಿರಲಿಲ್ಲ. ಮೊಬೈಲ್‌ ಫೋನ್ ಸಹ ಕೊಂಡೊಯ್ಯದಿರುವುದರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ರಜೆಯಲ್ಲಿದ್ದರೂ ಸಮವಸ್ತ್ರ ಧರಿಸಿ ಏಕೆ ಬಂದಿದ್ದರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಈ ಮಧ್ಯೆ, ರಾಕೇಶ್‌ಗೆ ಯಾರ ಜತೆಯೂ ವೈರತ್ವ ಇರಲಿಲ್ಲ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಸೆಪ್ಟೆಂಬರ್ 2ರಂದೂ ರಾಕೇಶ್ ಮನೆಗೆ ಬಾರದಿದ್ದಾಗ, ಸ್ನೇಹಿತರ ಮನೆಗೆ ತೆರಳಿರಬಹುದು ಎಂದು ಕುಟುಂಬದವರು ಭಾವಿಸಿದ್ದರು. ಆದರೆ, ಸೆ.3ರಂದೂ ಅವರು ವಾಪಸಾಗದಿದ್ದಾಗ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ರಾಕೇಶ್ ತಂದೆ ನೀಡಿದ ದೂರಿನ ಆಧಾರದಲ್ಲಿ ಅಧಿಕೃತ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com