
ನವದೆಹಲಿ: ಭೀಕರ ಇರ್ಮಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ಅಮೆರಿಕಾ, ವೆನೆಝುವೆಲಾ, ಫ್ರಾನ್ಸ್ ಮತ್ತು ನೆದರ್ ರ್ಲ್ಯಾಂಡ್ ಗಳಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವಲಸಿಗರ ಜೊತೆ ಸತತ ಸಂಪರ್ಕದಲ್ಲಿದ್ದು ಅವರ ಪರಿಸ್ಥಿತಿ ಬಗ್ಗೆ ನಿಗಾವಹಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ನಾಲ್ಕು ದೇಶಗಳಲ್ಲಿರುವ ಭಾರತೀಯ ರಾಯಭಾರಿಗಳು ಅಲ್ಲಿನ ಸ್ಥಳೀಯ ಸರ್ಕಾರಗಳ ಜೊತೆ ನಿಕಟ ಸಂಪರ್ಕದಲ್ಲಿದ್ದು ಚಂಡಮಾರುತದಿಂದ ತೊಂದರೆಗೊಳಗಾದ ಭಾರತೀಯರ ಸಹಾಯಕ್ಕೆ ನೆರವಾಗುವುದಾಗಿ ತಿಳಿಸಿದ್ದಾರೆ ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಇರ್ಮಾ ಚಂಡಮಾರುತದಿಂದ ಹಾನಿಗೀಡಾದ ವೆನೆಝುವೆಲಾ, ನೆದರ್ಲ್ಯಾಂಡ್, ಫ್ರಾನ್ಸ್ ಮತ್ತು ಅಮೆರಿಕಾದಲ್ಲಿರುವ ಭಾರತೀಯ ವಲಸಿಗರ ಜೊತೆ ನಿರಂತರ ಸಂಪರ್ಕದಲ್ಲಿ ನಮ್ಮ ರಾಯಭಾರ ಕಚೇರಿ ಸಿಬ್ಬಂದಿ ಇದ್ದಾರೆ. ಸ್ಥಳೀಯ ಸರ್ಕಾರಗಳ ಜೊತೆ ಸೇರಿ ಭಾರತೀಯರಿಗೆ ಸಹಾಯ ಮಾಡಲಾಗುವುದು ಎಂದು ರವೀಶ್ ಕುಮಾರ್ ಸರಣಿ ಟ್ವೀಟ್ ನಲ್ಲಿ ಹೇಳಿದ್ದಾರೆ.
5ನೇ ವರ್ಗದ ಚಂಡಮಾರುತವಾದ ಇರ್ಮಾ ಗಂಟೆಗೆ ಸುಮಾರು 260 ಕಿಲೋ ಮೀಟರ್ ವೇಗದಲ್ಲಿ ಫ್ಲೋರಿಡಾ ಕಡೆ ಬೀಸುತ್ತಿದೆ. ಕ್ಯೂಬಾದ ಕಾಮಾಗ್ಗಿ ದ್ವೀಪಸಮೂಹದಲ್ಲಿ ಬಿದ್ದಿತ್ತು. ಕೆರಬಿಯನ್ ದ್ವೀಪದಲ್ಲಿ ಈ ಚಂಡಮಾರುತಕ್ಕೆ ಕನಿಷ್ಟ 19 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿಯ ಮನೆ ನಾಶಗೊಂಡಿವೆ.
ತುರ್ತು ಸಂದರ್ಭದಲ್ಲಿ ಭಾರತೀಯರು ಸಂಪರ್ಕಿಸಬೇಕಾದ ಭಾರತದ ರಾಯಭಾರ ಕಚೇರಿ ಸಂಖ್ಯೆ ವೆನೆಝುವೆಲಾ(+58 4241951854/4142214721), ನೆದರ್ಲಾಂಡ್ (+31247247247), ಫ್ರಾನ್ಸ್ (0800000971). ಆಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ನೆದರ್ಲ್ಯಾಂಡ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಡಚ್ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿದೆ.
ವೆನೆಝುವೆಲಾದ ಕಾರಕಾಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೈಂಟ್ ಮಾರ್ಟಿನ್ ನಲ್ಲಿ ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದ್ದು ಅಲ್ಲಿರುವ ಎಲ್ಲಾ ಭಾರತೀಯರ ರಕ್ಷಣೆಗೆ ಸಹಕಾರ ನೀಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Advertisement