
ನವದೆಹಲಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ರಂಥವರನ್ನು ಸೈದ್ಧಾಂತಿಕ ಸಂಘರ್ಷ ಹಿನ್ನೆಲೆಯಲ್ಲಿ ಹತ್ಯೆ ಮಾಡಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು, ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ ಅಥವಾ ಆರ್ ಎಸ್ಎಸ್ ಕಾರಣ ಎಂದು ತಮ್ಮ ಪಕ್ಷ ಯಾವತ್ತಿಗೂ ಹೇಳಿಲ್ಲ ಎಂದಿದ್ದಾರೆ.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಗೆ ಸ್ಪಷ್ಟನೆ ನೀಡಿರುವ ಅವರು, ಗೌರಿ ಲಂಕೇಶ್ ಹತ್ಯೆಯ ಹಿಂದೆ ಆರ್ಎಸ್ಎಸ್-ಬಿಜೆಪಿ ಇದೆ ಎಂದು ಕಾಂಗ್ರೆಸ್ ಯಾವತ್ತೂ ಹೇಳಿರಲಿಲ್ಲ. ಆದರೆ ಇಲ್ಲೊಂದು ಖಂಡಿತವಾಗಿಯೂ ಸೈದ್ಧಾಂತಿಕ ಸಂಘರ್ಷವಿದೆ. ಬಹುಶಃ ಜನರು ಇದಕ್ಕಾಗಿ ಕೊಲೆಯಾಗುತ್ತಾರೆ ಎನಿಸುತ್ತದೆ ಎಂದರು.
ಆರೋಪಿಗಳನ್ನು ಪತ್ತೆಹಚ್ಚಿ ಕೂಡಲೇ ಜೈಲಿಗೆ ಕಳುಹಿಸಬೇಕು. ಪೊಲೀಸರು ತನಿಖೆಯನ್ನು ತ್ವರಿತಗೊಳಿಸಬೇಕು. ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಪ್ರತಿಯೊಬ್ಬರು ಕೂಡ ಒಟ್ಟಾಗಿ ಕೆಲಸ ಮಾಡಬೇಕು. ಅಪರಾಧಿಗಳಿಗೆ ಪಾಠ ಕಲಿಸಬೇಕು. ಈ ಬಗ್ಗೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ಸೋನಿಯಾ ಗಾಂಧಿಯವರು ಕೂಡ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಮುಖ್ಯ ಮಂತ್ರಿ ಜೊತೆ ಮಾತನಾಡಿದ್ದಾರೆ ಎಂದರು.
ಸರ್ಕಾರದ ಸಿದ್ಧಾಂತಗಳಿಂದ ಅಪರಾಧಿಗಳಿಗೆ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದು ಖರ್ಗೆ ಇದೇ ಸಂದರ್ಭದಲ್ಲಿ ಹೇಳಿದರು.
Advertisement